ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳು ಹಸಿದು ಪಾಠ ಕೇಳಬಾರದು ಎಂದು ಸರ್ಕಾರ ಮಧ್ಯಾಹ್ನದ ವೇಳೆ ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಬಿಸಿಯೂಟ ನೀಡುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪಾಠದ ಜತೆಗೆ ಸತ್ವಯುತ ಆಹಾರ ದೊರೆಯುವುದರಿಂದ ಕಲಿಕೆಯಲ್ಲಿ ಹೆಚ್ಚು ಲವಲವಿಕೆಯಿಂದ ತೊಡಗಿಸಿಕೊಳ್ಳುವಂತಾಗಿದ್ದು, ಶಾಲೆಯ ದಾಖಲಾತಿ ಹಾಗೂ ಹಾಜರಾತಿ ಪ್ರಮಾಣವೂ ಗಣನೀಯವಾಗಿ ಏರಿಕೆ ಕಂಡಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟದ ಜತೆಗೆ ಮೊಟ್ಟೆ ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡುತ್ತಿರುವುದು ಮಕ್ಕಳಲ್ಲಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುತ್ತಿದೆ. ಆದರೆ, ಬಿಸಿಯೂಟದ ಸಾಂಬಾರಿಗೆ ಕೇವಲ ತೊಗರಿಬೇಳೆಯನ್ನು ಮಾತ್ರ ಸರಬರಾಜು ಮಾಡುತ್ತಿದ್ದು, ಇದರಿಂದಾಗಿ ಮಕ್ಕಳು ನಿತ್ಯ ಒಂದೇ ಬಗೆಯ ಸಾಂಬಾರು ಊಟ ಮಾಡುವಂತಾಗಿದ್ದು, ಸರ್ಕಾರ ಬೇಳೆ ಕಾಳುಗಳ ಜತೆಗೆ ಕಡಲೆಕಾಳು, ಅವರೆಕಾಳು, ಹುರುಳಿಕಾಳಿನಂತಹ ಇತರೆ ಕಾಳುಗಳನ್ನೂ ಪೂರೈಕೆ ಮಾಡಿದರೆ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶ ದೊರೆಯುವ ಜತೆಗೆ ಆಹಾರದಲ್ಲಿ ವೈವಿಧ್ಯತೆಯನ್ನು ಕಾಣಲು ಸಾಧ್ಯವಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತಿಸಿ ವಿವಿಧ ಕಾಳುಗಳನ್ನು ಶಾಲೆಗಳಿಗೆ ಪೂರೈಸಲಿ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.





