ಡಿ.೧೨ರಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ, ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠವು ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಬ್ರಹ್ಮೇಶ್ವರಸ್ವಾಮಿ ಮಠಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿ ಅದರ ತೀರ್ಪನ್ನು ಕನ್ನಡದಲ್ಲಿಯೇ ನೀಡಿರುವುದು ಸ್ವಾಗತಾರ್ಹ.
ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಸ್ಥಳೀಯ ಭಾಷೆಯೊಂದರಲ್ಲಿ ತೀರ್ಪು ಪ್ರಕಟವಾಗಿರುವುದು ಇದೇ ಪ್ರಥಮ ಎಂದು ಹೇಳಲಾಗುತ್ತಿದೆ. ಜನ ಸಾಮಾನ್ಯರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಕನ್ನಡದಲ್ಲಿಯೇ ತೀರ್ಪು ನೀಡಿದ ಈ ಇಬ್ಬರೂ ನ್ಯಾಯಮೂರ್ತಿಗಳು ಅಭಿನಂದನಾರ್ಹರು. ಪ್ರತಿವರ್ಷ ಡಿ.೧೧ರಂದು ‘ಭಾರತ ಭಾಷಾ ದಿನ‘ವನ್ನಾಗಿ ಆಚರಿಸಲಾಗುತ್ತದೆ. ಇದೇ ತಿಂಗಳಿನಲ್ಲಿ ನ್ಯಾಯಾಲಯವೊಂದು ಸ್ಥಳೀಯ ಭಾಷೆಯಲ್ಲಿಯೇ ತೀರ್ಪು ನೀಡಿರುವುದು ಸ್ಥಳೀಯ ಭಾಷೆಗಳನ್ನು ಗೌರವಿಸುವ ಪರಂಪರೆಗೆ ನಾಂದಿ ಹಾಡಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡುವಂತಾಗಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.