‘ನದಿ ಜೋಡಣೆ’ ಯೋಜನೆಗೆ ಸಾಕಷ್ಟು ವಿರೋಧಗಳು ಕೇಳಿಬರುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರಿಸುತ್ತಿರುವುದು ಸಮಂಜಸವಲ್ಲ.
ಈ ಹಿಂದೆಯೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಗೋದಾವರಿನದಿ ನೀರು ಪೂರೈಸುವುದಾಗಿ ಹೇಳಿ ಕಡಿಮೆ ಪ್ರಮಾಣದ ನೀರನ್ನು ಹಂಚಿಕೆ ಮಾಡಿತ್ತು. ನೀರು ಹಂಚಿಕೆ ವಿಚಾರದಲ್ಲಿ ಆಗಿರುವ ಈ ಅನ್ಯಾಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಗೆ ಸಹಿ ಹಾಕಲು ನಿರಾಕರಿಸಿದೆ. ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ರಾಜ್ಯಗಳೂ ಈ ಯೋಜನೆಯ ನಿಲುವು ಸರಿಯಾಗಿಲ್ಲ ಎಂದು ಸಹಿ ಹಾಕಲು ಒಪ್ಪಿಲ್ಲ. ಹೀಗೆ ಕೆಲವು ರಾಜ್ಯಗಳ ಅನುಮತಿ ಇಲ್ಲದೆಯೂ ಕೇಂದ್ರ ಸರ್ಕಾರವು ಯೋಜನೆಯನ್ನು ಜಾರಿಗೆ ತರುತ್ತಿರುವುದು ಸರಿಯಲ್ಲ. ಅಲ್ಲದೆ ಈ ಯೋಜನೆ ಪ್ರಕೃತಿಗೆ ವಿರುದ್ಧವಾಗಿದೆ. ಅವೈಜ್ಞಾನಿಕವಾಗಿ ನದಿಗಳನ್ನು ಜೋಡಿಸುವುದರಿಂದ ಅಪಾರ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ. ಇಷ್ಟಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಕೆನ್ ಮತ್ತು ಬೇತ್ವಾ ನದಿಗಳ ಜೋಡಣೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಈ ಯೋಜನೆಯನ್ನು ಕೂಡಲೇ ನಿಲ್ಲಿಸಿ ನದಿಗಳ ಸ್ವಚ್ಛತೆ ಕಾಪಾಡುವತ್ತ ಸರ್ಕಾರ ಗಮನಹರಿಸಲಿ.
-ಜಿ.ಬಿನಿತಾ, ಕಲಬುರಗಿ.





