ಲೈಂಗಿಕ ದೌರ್ಜನ್ಯಕ್ಕೊಳಗಾಗಿ ದೂರು ನೀಡಲು ಬಂದಿದ್ದ ಬಾಲಕಿಯ ಮೇಲೆಯೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಅರುಣ್ ಎಂಬ ಪೇದೆಯು ಅತ್ಯಾಚಾರವೆಸಗಿದ್ದಾನೆ. ಪ್ರೀತಿಯ ಜಾಲಕ್ಕೆ ಸಿಲುಕಿ ೧೭ ವರ್ಷದ ಬಾಲಕಿಯೊಬ್ಬಳು ಯುವಕನೋರ್ವನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮೋಸ ಹೋಗಿದ್ದಳು. ತನಗಾದ ಅನ್ಯಾಯದ ವಿರುದ್ಧ ದೂರು ನೀಡಲು ಆಕೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾಗ ಕರ್ತವ್ಯದಲ್ಲಿದ್ದ ಅರುಣ್ ಎಂಬ ಪೇದೆ ನ್ಯಾಯ ಕೊಡಿಸುವುದಾಗಿ ನಂಬಿಸಿ, ಹೋಟೆಲ್ ರೂಮ್ ಒಂದರಲ್ಲಿ ಎರಡು ಬಾರಿ ಅತ್ಯಾಚಾರವೆಸಗಿದ್ದಲ್ಲದೆ ಆಕೆಯ ಬೆತ್ತಲೆ ಫೋಟೋಗಳನ್ನು ತೆಗೆದುಕೊಂಡು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ತನಗಾದ ಅನ್ಯಾಯದ ಬಗ್ಗೆ ಆಕೆಯ ತಾಯಿಯ ಬಳಿ ಹೇಳಿಕೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೇದೆ ಹಾಗೂ ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಯುವಕನನ್ನು ಬಂಽಸಿದ್ದಾರೆ. ರಕ್ಷಣೆ ನೀಡ ಬೇಕಾದ ಪೊಲೀಸ್ ಪೇದೆಯೇ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪೊಲೀಸ್ ಪೇದೆಯನ್ನು ಕೆಲಸದಿಂದ ವಜಾಗೊಳಿಸುವ ಜತೆಗೆ ಆತನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ.
-ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ.





