ಕಳೆದ ಹತ್ತು ವರ್ಷಗಳಲ್ಲಿ ದೇಶದ ವಿವಿಧ ಬ್ಯಾಂಕುಗಳಲ್ಲಿ ರೈಟ್ ಆಫ್ ಮಾಡಿರುವ ಒಟ್ಟು ಸಾಲದ ಮೊತ್ತ (ಎನ್‌ಪಿಎ) 16.35 ಲಕ್ಷ ಕೋಟಿ ರೂ. ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಲೋಕಸಭೆಗೆ ತಿಳಿಸಿದ್ದಾರೆ.
2023-24ನೇ ವಿತ್ತೀಯ ವರ್ಷದಲ್ಲಿ ಒಟ್ಟು 1.70 ಲಕ್ಷ ಕೋಟಿ ರೂ. ವಸೂಲಾಗದ ಸಾಲವನ್ನು ಲೈಟ್‌ಆಫ್ ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ. ಈ ರೀತಿಯ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರತಿ ಬ್ಯಾಂಕಿನಲ್ಲೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇವುಗಳ ವಸೂಲಾತಿಯ ಬಗ್ಗೆ ಸಂಬಂಧಿಸಿದ ಬ್ಯಾಂಕುಗಳ ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿರುವುದೇ ಎನ್‌ಪಿಎಗಳ ಹೆಚ್ಚಳಕ್ಕೆ ಕಾರಣವಾಗಿರಬಹದು. ಉದ್ಯಮಿ ವಿಜಯ್ ಮಲ್ಯ ಕೂಡ ದೇಶದ ಹಲವಾರು ಬ್ಯಾಂಕುಗಳಿಗೆ 9,000 ಸಾವಿರ ಕೋಟಿ ರೂ.ಗಳಷ್ಟು ಸಾಲದ ಹಣವನ್ನು ಮರು ಪಾವತಿಸದೇ ವಿದೇಶದಲ್ಲಿ ಅಡಗಿರುವುದು ಗುಟ್ಟಿನ ವಿಷಯವೇನಲ್ಲ. ಅವರನ್ನು ಭಾರತಕ್ಕೆ ಕರೆತರುವ ಕಾನೂನಿನ ಪ್ರಕ್ರಿಯೆಗೆ ಬಾಲಗ್ರಹ ಬಡಿದಂತೆ ಕಾಣುತ್ತದೆ. ವಿಜಯ್ ಮಲ್ಯರಂತೆ ಇನ್ನೂ ಹಲವಾರು ಉದ್ಯಮಿಗಳು ದೇಶದ ಸಾರ್ವಜನಿಕ ಬ್ಯಾಂಕುಗಳಿಂದ ಪಡೆದ ಲಕ್ಷಾಂತರ ಕೋಟಿ ರೂ. ಸಾಲ ವಸೂಲಾಗದೇ ಎನ್‌ಪಿಎ ಆಗುತ್ತಿರುವುದು ಅತ್ಯಂತ ಆತಂಕಕಾರಿಯಾದ ವಿಚಾರ.
ಆರ್‌ಬಿಐ ನೀಡಿರುವ ಮಾಹಿತಿಯಂತೆ 2024ರ ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕುಗಳಳಲ್ಲಿ ತಲಾ 1,000 ಕೋಟಿ ರೂ.ಗಳಿಂತ ಹೆಚ್ಚಿನ ಸಾಲ ಪಡೆದು ಅದನ್ನು ಸರಿಯಾಗಿ ಮರಳಿಸದ 29 ಕಂಪೆನಿಗಳು ದೇಶದಲ್ಲಿ ಇವೆ. ಬ್ಯಾಂಕಿನಲ್ಲಿ ಇರುವ ಹಣ ದೇಶದ ಜನರ ಹಣ. ಇದನ್ನು ಮನಸೋ ಇಚ್ಛೆ ಸಾಲ ನೀಡಿ ಅನುತ್ಪಾದಕ ಆಸ್ತಿಯನ್ನಾಗಿ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಗಿಂದಾಗ್ಗೆ ಬ್ಯಾಂಕುಗಳ ಎನ್‌ಪಿಎ ಹೆಚ್ಚಾಗದಂತೆ ಕ್ರಮವಹಿಸಬೇಕು.
-ಕೆ.ವಿ.ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.





