ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಧಿಕ ಬಡ್ಡಿ ದರದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ನೀಡಿ, ವಸೂಲಾತಿಯ ನೆಪದಲ್ಲಿ ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದುದ್ದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ.
ರಾಜ್ಯ ಸರ್ಕಾರ ರೂಪಿಸಿದ ಈ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರವರು ಅಂಕಿತ ಹಾಕಿದ್ದು, ಆ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ದೈಹಿಕ ಹಿಂಸೆ ಮಾಡುವುದು, ಮನೆಯ ಬಳಿ ಹೋಗಿ ಗಲಾಟೆ ಮಾಡಿಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಗಳಿಗೆ ಬೀಗ ಜಡಿಯುವುದನ್ನು ತಪ್ಪಿಸಿದೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿಯಿಂದ ಬೇಸತ್ತ ಅನೇಕ ಮಂದಿ ಗ್ರಾಮಗಳನ್ನೇ ತೊರೆದಿದ್ದು, ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ದಾಖಲಾಗಿವೆ. ಇಂತಹ ಪ್ರಕರಣಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
ಈ ಸುಗ್ರೀವಾಜ್ಞೆಗೆ ಹಲವು ಷರತ್ತುಗಳೊಂದಿಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಅಂಕುಶ ಹಾಕಲಿದಿಯೇ ಕಾದುನೋಡಬೇಕು.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು



