ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಶಿಕ್ಷಕರ ವರ್ಗಾವಣೆಗೂ ಮುನ್ನ ಆಯಾ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ, ಅಗತ್ಯ ಇರುವ ಶಾಲೆಗಳಿಗೆ ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡಲಾಗುತ್ತಿದೆ.
ಹೆಚ್ಚುವರಿ ಶಿಕ್ಷಕರನ್ನು ಶಾಲೆಯಲ್ಲಿ ಗುರುತಿಸುವಾಗ ಆಯಾ ಶಾಲೆಗಳಲ್ಲಿ ಕಳೆದ ಡಿಸೆಂಬರ್ ೨೦೨೪ರ ಅಂತ್ಯಕ್ಕೆ ಇದ್ದ ಮಕ್ಕಳ ದಾಖಲಾತಿಯನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಪ್ರಸ್ತುತ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸಲು ಸರ್ಕಾರ ಮುಂದಾಗಿದೆ. ಅದರಂತೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ (೧ರಿಂದ ೫) ೧೧ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಇಬ್ಬರು ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (೬ ರಿಂದ ೭) ೧೧ ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಇಬ್ಬರು ಶಿಕ್ಷಕರು, ಒಂದು ವೇಳೆ ೧೧ಕ್ಕಿಂತ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಒಬ್ಬರೇ ಶಿಕ್ಷಕರು ಎಂಬ ನಿಯಮ ರೂಪಿಸಲಾಗಿದೆ. ಆದರೆ ಪ್ರಸ್ತುತ ಜೂನ್ ತಿಂಗಳ ದಾಖಲಾತಿ ಸಮಯದಲ್ಲಿ ಮಕ್ಕಳ ಸಂಖ್ಯೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗುವುದರಿಂದ, ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆಗೆ ಮಾನದಂಡವಾಗಿರುವ ಕಳೆದ ವರ್ಷದ ೨೦೨೪ ಡಿಸೆಂಬರ್ ತಿಂಗಳ ಅಂತ್ಯದ ಮಕ್ಕಳ ದಾಖಲಾತಿಯನ್ನು ಕೈಬಿಟ್ಟು, ಪ್ರಸ್ತುತ ಶೈಕ್ಷಣಿಕ ವರ್ಷದ ಜೂನ್ ತಿಂಗಳ ಮಕ್ಕಳ ದಾಖಲಾತಿಯನ್ನು ಮಾನದಂಡವಾಗಿ ಇಟ್ಟುಕೊಂಡು ಅದರಂತೆ ಸರ್ಕಾರ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದರೆ ರಾಜ್ಯದ ನಾನಾ ಕಡೆ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಹೆಚ್ಚುವರಿ ಪ್ರಕ್ರಿಯೆಯಿಂದ ದೂರ ಉಳಿದು ಆಯಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ನೆರವಾದಂತಾಗುತ್ತದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





