Mysore
26
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಓದುಗರ ಪತ್ರ: ಗ್ಯಾರಂಟಿ ಯೋಜನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಸಾಗತಾರ್ಹ

ಓದುಗರ ಪತ್ರ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಲ್ಲ ರಾಜಕೀಯ ಪಕ್ಷಗಳು ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಲು ಮುಂದಾಗುತ್ತಿದ್ದು, ಈ ಗ್ಯಾರಂಟಿ ಯೋಜನೆಗಳು ಜನರು ಕೆಲಸ ಮಾಡುವುದನ್ನೇ ಮರೆಯುವಂತೆ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಅವರನ್ನು ಒಳಗೊಂಡ ಪೀಠ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತವೆ. ಹೇಗಿದ್ದರೂ ಉಚಿತ ರೇಷನ್, ತಿಂಗಳಿಗೆ ಒಂದಿಷ್ಟು ಹಣ ಸಿಗುತ್ತಿದೆ. ಹೀಗಿರುವಾಗ ಕೆಲಸ ಏಕೆ ಮಾಡಬೇಕು ಎಂಬ ಮನೋಭಾವನೆಯನ್ನು ಜನರು ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಉಚಿತ ಯೋಜನೆಗಳು ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗ್ಯಾರಂಟಿ ಯೋಜನೆಗಳಿಂದಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವುದು ಚಿಂತನಾರ್ಹವಾಗಿದೆ.

ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತವೆ. ಈ ಗ್ಯಾರಂಟಿ ಯೋಜನೆಗಳು ರಾಜ್ಯ ಹಾಗೂ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಹಿಂದೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಗ್ಯಾರಂಟಿ ಯೋಜನೆಗಳು ದೇಶಾದ್ಯಂತ ಮತದಾರರನ್ನು ಸೆಳೆಯುವ ಅಸ್ತ್ರಗಳಾಗಿ ಬದಲಾಗಿರುವುದು ದುರಂತವೇ ಸರಿ.

ರಾಜಕೀಯ ಪಕ್ಷಗಳು ಆದಾಯ ಹೆಚ್ಚಳ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೇ ವಿನಾ ಉಚಿತ ಯೋಜನೆಗಳನ್ನು ನೀಡಿ ರಾಜ್ಯದ ಆರ್ಥಿಕ ವ್ಯವಸ್ಥೆ ಹಳ್ಳ ಹಿಡಿಯುವಂತೆ ಮಾಡಬಾರದು. ಹೀಗಾಗಿ ಎಲ್ಲ ರಾಜ್ಯಗಳ ಸರ್ಕಾರಗಳು ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದನ್ನ ನಿಲ್ಲಿಸಬೇಕು. ಮತದಾರರೂ ಕೂಡ ಗ್ಯಾರಂಟಿ ಯೋಜನೆಗಳ ಬಗ್ಗೆ ಅವಲೋಕಿಸಿ ನಂತರ ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷಕ್ಕೆ ಮತ ನೀಡಬೇಕು. ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ಸ್ವಾಗತಾರ್ಹ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!