ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು ಮುಂಜಾನೆ 7.00 ಗಂಟೆ ಸುಮಾರಿಗೆ ಹಾಲು ತರಲು ಹೋಗಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಖದೀಮರು ಅವರ ಕೊರಳಿನಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಇವರ ಮನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಿಂದ ಕೇವಲ 200 ಮೀಟರ್ ದೂರದಲ್ಲಿದ್ದು, ಇಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದಾದರೆ ಉಳಿದ ಭಾಗಗಳಲ್ಲಿ ಮಹಿಳೆಯರು ಓಡಾಡುವುದಾದರೂ ಹೇಗೆ? ಪೊಲೀಸ್ ಇಲಾಖೆಯು ಈ ಬಗ್ಗೆ ತುರ್ತಾಗಿ ಕ್ರಮಕೈಗೊಂಡು ಸರಗಳ್ಳರ ಎಡೆಮುರಿಕಟ್ಟಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.