ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ( ಇವರನ್ನು ಕೂಡ ಸ್ಪೀಕರ್ ಎಂದು ಕರೆಯಬಹುದು) ಬಸವರಾಜ ಹೊರಟ್ಟಿ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ.
ಬಸವರಾಜ ಹೊರಟ್ಟಿಯವರು ಯು.ಟಿ. ಖಾದರ್ ರವರಿಗೆ ಬಹಿರಂಗ ಪತ್ರ ಬರೆದು ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಖಾದರ್ ಹೊರಟ್ಟಿಯವರು ತಮ್ಮ ಹಿರಿಯ ಅಣ್ಣನ ಸಮಾನರಾಗಿದ್ದು, ಆಗಿರುವ ಲೋಪಗಳನ್ನು ಮುಂದೆ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸ್ವಾಭಿಮಾನ ಬದುಕಿಗೆ ಶಿಕ್ಷಣವೇ ಮದ್ದು : ಸಿಎಂ ಸಿದ್ದರಾಮಯ್ಯ
ಹೊರಟ್ಟಿಯವರು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಪಳಗಿದ್ದಾರೆ. ಜನತಾ ಪರಿವಾರದ ಓರ್ವ ಹಿರಿಯ ನಾಯಕರಾಗಿದ್ದ ಅವರು ನಂತರದಲ್ಲಿ ಜಾ.ದಳಕ್ಕೆ ಸೇರಿದ್ದರು. ವಿಧಾನ ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಹಲವು ಬಾರಿ ಆರಿಸಿ ಬಂದಿರುವ ಹೊರಟ್ಟಿ ವಿಧಾನ ಪರಿಷತ್ತಿನ ಸಭಾಪತಿಯಾಗಿಯೂ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಹಿರಿಯ ರಾಜಕೀಯ ಮುತ್ಸದ್ದಿ ಪಕ್ಷಾತೀತವಾಗಿ ಎಲ್ಲರಿಂದಲೂ ಗೌರವಿಸಲ್ಪಡುತ್ತಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತು ರಾಜ್ಯ ವಿಧಾನ ಮಂಡಲದ ಎರಡು ಕಣ್ಣುಗಳಿದ್ದ ಹಾಗೆ. ಈ ಎರಡೂ ಕಣ್ಣುಗಳ ರೆಪ್ಪೆಗಳಾಗಿ ಖಾದರ್ ಹಾಗೂ ಹೊರಟ್ಟಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರೂ ಪರಸ್ಪರ ಹೊಂದಿಕೊಂಡು ಕಾರ್ಯ ನಿರ್ವಹಿಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾಗಿದೆ.
-ಕೆ.ವಿ.ವಾಸು, ಮೈಸೂರು





