Mysore
15
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಓದುಗರ ಪತ್ರ: ಯುವಕರಿಂದ ಸಮಾಜ ಜಾಗೃತಗೊಳ್ಳಬೇಕು

ಓದುಗರ ಪತ್ರ

ಸರಗೂರು ತಾಲ್ಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಕಪಿಲ ನದಿಯ ದಂಡೆಯ ಮೇಲೆ ಐತಿಹಾಸಿಕ ಕಾಮೇಶ್ವರ ದೇವರ ದೇವಾಲಯವಿದೆ. ಈ ದೇವಾಲಯ ಚೋಳರಿಂದ ನಿರ್ಮಾಣ ವಾಯಿತು ಎಂಬ ಇತಿಹಾಸವನ್ನು ಹೊಂದಿದ್ದು, ಶಿಥಿಲಗೊಂಡಿದ್ದ ಈ ದೇವಾಲಯದ ದುರಸ್ತಿಗೆ ಕಳೆದ ವರ್ಷ ಊರಿನ ಮುಖಂಡರು ಸೇರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮರು ನಿರ್ಮಾಣ ಮಾಡಲು ಆದೇಶ ಪಡೆದು, ಅದರಂತೆ ನೂತನ ದೇವಾಲಯ ನಿರ್ಮಿಸಿ ಫೆಬ್ರವರಿ ೧೦ರಂದು ಉದ್ಘಾಟನೆ ಮಾಡಲಾಗಿದೆ.

ಈ ಹಿಂದೆ ದೇವಾಲಯದ ಒಳಗೆ ತಳ ಸಮುದಾಯದ ಜನರ ಪ್ರವೇಶ ವನ್ನು ನಿಷೇಧಿಸಲಾಗಿತ್ತು. ಜಾತಿ ವ್ಯವಸ್ಥೆ, ಜೀತ ಪದ್ಧತಿ, ಅನಾಗರಿಕತೆ, ಮೂಢನಂಬಿಕೆ, ಶಿಕ್ಷಣದ ಕೊರತೆ ಹೆಚ್ಚಾಗಿದ್ದು, ಈ ವ್ಯವಸ್ಥೆ ಪ್ರಸ್ತುತವೂ ಅನೇಕ ಹಳ್ಳಿಗಳಲ್ಲಿ ಜೀವಂತವಾಗಿರುವುದು ಬೇಸರದ ಸಂಗತಿ. ಆದರೆ, ಈ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ಬಳಿಕ ಸರ್ಕಾರ ಎಲ್ಲ ಜನಾಂಗದ ಜನರೂ ದೇವಾಲಯ ಪ್ರವೇಶಿಸಬಹುದು. ಇದನ್ನು ವಿರೋಧಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಫಲಕ ಅಳವಡಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ಮಾಯವಾಯಿತು.

ಇದನ್ನು ಅರಿತ ಗ್ರಾಮದ ತಳ ಸಮುದಾಯದ ವಿದ್ಯಾವಂತ ಯುವಕರು ಒಗ್ಗಟ್ಟಿನಿಂದ ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದರು. ಆ ಮೂಲಕ ನೂತನ ಕಾಮೇಶ್ವರ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದರು. ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಸಮಾನತೆಯನ್ನು ಸಾರಿದರು. ಈ ಬದಲಾವಣೆ ಎಲ್ಲ ಗ್ರಾಮಗಳಲ್ಲಿಯೂ ಆಗಬೇಕು. ಇದು  ಯುವಕರಿಂದ ಮಾತ್ರವಲ್ಲದೆ ಹಿರಿಯ ನಾಗರಿಕರೂ ಇಂತಹ ಬದಲಾವಣೆಗೆ ನಾಂದಿ ಹಾಡಬೇಕು ಆಗ ಮಾತ್ರ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಸಾಧ್ಯ.

-ಕೆ.ಎಂ.ಅಭಿಷೇಕ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.

Tags:
error: Content is protected !!