ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್ ವಾಟರ್ ಬಾಟಲ್‌ಗಳು ದೊರೆಯುವುದಿಲ್ಲ. ಈ ಬಗ್ಗೆ ರೈಲು ಗಾಡಿಗಳಲ್ಲಿ ನೀರಿನ ಬಾಟಲಿ ಮಾರಾಟ ಮಾಡುವವರನ್ನು ಕೇಳಿದರೆ ಅರ್ಧ ಲೀ. ನೀರಿನ ಬಾಟಲಿ ದೊರೆಯುವುದಿಲ್ಲ ಎನ್ನುತ್ತಾರೆ. ಈ ಚಳಿಗಾಲದಲ್ಲಿ ಒಂದು ಗುಟುಕು ನೀರು ಕುಡಿಯಲು ಕೂಡ ಅನಿವಾರ್ಯವಾಗಿ ಒಂದು ಲೀಟರ್ ನೀರನ್ನು ತೆಗೆದುಕೊಂಡು ಉಳಿದುದನ್ನು ಆಚೆಗೆ ಚೆಲ್ಲಬೇಕು. ಇದು ಒಂದು ರೀತಿಯಲ್ಲಿ ಅನವಶ್ಯಕವಾಗಿ ನೀರನ್ನು ಪೋಲುಮಾಡಿದಂತೆ, ರೈಲ್ವೇ ಬೋಗಿಗಳ ಒಳಗೆ ‘ನೀರು ಅತ್ಯಮೂಲ್ಯ ವಸ್ತು, ಅದನ್ನು ಪೋಲು ಮಾಡದಿರಿ’ ಎಂದು ಬರೆದಿರುವುದನ್ನು ನೋಡಿದಾಗ ಈ ಘೋಷವಾಕ್ಯಕ್ಕೆ ಅಪಮಾನ ಮಾಡಿದಂತೆ ಎನಿಸಿತು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಅರ್ಧ ಲೀಟರ್ ನೀರು ಕುಡಿಯುವ ಬಾಟಲಿಗಳ ವ್ಯವಸ್ಥೆಯನ್ನು ಕಲ್ಪಿಸುವುದು ಅಗತ್ಯ.
-ಬೂಕನಕೆರೆ ವಿಜಯೇಂದ್ರ, ಮೈಸೂರು





