ಚಿನ್ನ ಕಳ್ಳಸಾಗಾಣಿಕೆ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಅವರನ್ನು ಬಳಸಿಕೊಂಡು ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲದ ಜೊತೆ ರಾಜ್ಯದ ಇಬ್ಬರು ಪ್ರಭಾವಿ ಸಚಿವರ ನಂಟೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಡಿಆರ್‌ಐನ ಕಸ್ಟಮ್ಸ್ ಇಲಾಖೆಯ ತನಿಖೆ ವೇಳೆ ಇಬ್ಬರು ಪ್ರಭಾವಿ ಸಚಿವರ ಹೆಸರುಗಳು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಅಧಿಕಾರಿಗಳು ಆ ಇಬ್ಬರು ಸಚಿವರ ಹೆಸರನ್ನು ಬಹಿರಂಗಪಡಿಸದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಸದ್ಯ ಈ ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದು, ಅಲ್ಲಿಯೂ ಇಬ್ಬರು ಸಚಿವರು ಎಂದೇ ವರದಿಯಾಗುತ್ತಿದೆ. ಪರಿಣಾಮ ಜನತೆಗೆ ರಾಜ್ಯದ ಎಲ್ಲ ಸಚಿವರ ಮೇಲೂ ಅನುಮಾನ ಮೂಡುವಂತಾಗಿದೆ. ಆದ್ದರಿಂದ ತನಿಖಾ ಅಧಿಕಾರಿಗಳು ಹಾಗೂ ಮಾಧ್ಯಮದವರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದಲ್ಲಿ ಶಾಮೀಲಾಗಿರುವ ಸಚಿವರ ಹೆಸರುಗಳನ್ನು ಬಹಿರಂಗಪಡಿಸಬೇಕಿದೆ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.





