ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಲ್ಲಿರುವ ಕೆಂಚಲಗೂಡು ಗೇಟಿನಿಂದ ಸಪ್ತ ಋಷಿ ನಗರ ಹಾಗೂ ವಿವೇಕಾನಂದ ನಗರ ಮೂಲಕ ಅನೇಕರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಮೈಸೂರಿಗೆ ಹೋಗಿ ಬರುತ್ತಾರೆ. ಆದರೆ, ಕೆಂಚಲಗೂಡಿನಿಂದ ಮೈಸೂರಿನ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು ೫ ಕಿ. ಮೀ. ಉದ್ದದ ರಸ್ತೆಯ ಪೈಕಿ ಸುಮಾರು ಒಂದೂವರೆ ಕಿ. ಮೀ. ನಷ್ಟು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ರಸ್ತೆಯನ್ನು ಮರುಡಾಂಬರೀಕರಣ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯ ನಿರ್ವಹಣೆಯು ಲೋಕೋಪಯೋಗಿ ಇಲಾಖೆಗೆ ಸೇರಿರುವುದರಿಂದ ಇಲಾಖೆಯವರು ಕೂಡಲೇ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕಿದೆ.
-ಕೆ. ಪಿ. ನಂಜುಂಡ ಸ್ವಾಮಿ, ಕೆಂಚಲಗೂಡು