ನಂಜನಗೂಡು ತಾಲ್ಲೂಕು ಮುಳ್ಳೂರು ಗ್ರಾಮದ ಮುಖ್ಯ ರಸ್ತೆ ತೀರಾ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಂಜನಗೂಡಿನಿಂದ ತಿ.ನರಸೀಪುರ ಮಾರ್ಗದಲ್ಲಿ ಸುಮಾರು ೬ ಕಿ.ಮೀ. ದೂರದಲ್ಲಿ ಮುಳ್ಳೂರು ಗ್ರಾಮದ ಗೇಟ್ ಇದ್ದು, ಅಲ್ಲಿಂದ ಸುಮಾರು ಒಂದು ಮೈಲಿ ದೂರ ಹಾಳಾದ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸುವುದು ಅನಿವಾರ್ಯವಾಗಿದೆ.
ಮಳೆ ಬಂದಾಗ ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ. ಗುಂಡಿಗಳೂ ಕಾಣುವುದಿಲ್ಲ. ಇಂತಹ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸಬೇಕೆಂದರೆ ಸರ್ಕಸ್ ಮಾಡಬೇಕು. ಇಲ್ಲಿ ನಡೆದುಕೊಂಡು ಹೋಗುವುದೂ ದುಸ್ತರವಾಗಿದೆ. ಊರಿನೊಳಗಡೆಗೂ ಪ್ರತಿದಿನ ಮೂರ‍್ನಾಲ್ಕು ಬಾರಿ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತದೆ. ಕೆಲವೊಮ್ಮೆ ಕಾರುಗಳೂ ಓಡಾಡುತ್ತವೆ. ಆದರೆ, ಒಮ್ಮೆ ಈ ರಸ್ತೆಯಲ್ಲಿ ಸಂಚರಿಸಿದರೆ, ಮತ್ತೆಂದೂ ಈ ಕಡೆಗೆ ಬರಬಾರದು ಎಂಬಂತಹ ಕೆಟ್ಟ ಅನುಭವ ಆಗುತ್ತದೆ.
ಈ ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರು ಶಂಕುಸ್ಥಾಪನೆ ನೆರವೇರಿಸಿ ತಿಂಗಳುಗಳೇ ಆಗಿವೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ . ಇದು ನೀರಾವರಿ ಪ್ರದೇಶವಾಗಿದ್ದು, ಕೃಷಿ ಚಟುವಟಿಕೆ ಸಮಯದಲ್ಲಿ ರಸ್ತೆಯ ಇಕ್ಕೆಲದಲ್ಲಿ ನೀರು ಹರಿಯುತ್ತದೆ. ಇದರಿಂದ ನಿಧಾನವಾಗಿ ತೇವಾಂಶ ರಸ್ತೆಯನ್ನು ಆವರಿಸಿ, ಡಾಂಬರು ಸಹಿತ ಕಿತ್ತುಬರುತ್ತದೆ. ರಸ್ತೆಯನ್ನು ದುರಸ್ತಿಪಡಿಸಿದರೂ ಒಂದೆರಡು ವರ್ಷಗಳಲ್ಲೇ ಇದು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಹಾಗಾಗಿ ರಸ್ತೆಯ ಇಕ್ಕೆಲದಲ್ಲೂ ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಿಸಿ, ಗದ್ದೆಗಳಿಂದ ರಸ್ತೆಗೆ ಬರುವ ನೀರು ಅದರಲ್ಲಿ ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಹಾಗಾದಾಗ ರಸ್ತೆ ಹೆಚ್ಚು ವರ್ಷಗಳು ಜನರ ಉಪಯೋಗಕ್ಕೆ ಬರುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಽಗಳು, ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.
-ಸಂತೋಷ್ ಕುಮಾರ್, ಮುಳ್ಳೂರು, ನಂಜನಗೂಡು ತಾ.





