Mysore
17
clear sky

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ :ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆ ಸಲ್ಲದು

ಕೆಲ ಮಠಗಳ ಸ್ವಾಮೀಜಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳಿಗೆ ಗುರಿಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ.

ನಮ್ಮ ಸಂವಿಧಾನವು ಕೇವಲ ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಎಲ್ಲ ಜಾತಿ, ಧರ್ಮದವರಿಗೂ ಸಮಾನವಾಗಿ ಬದುಕಲು ಅವಕಾಶ ನೀಡಿರುವ ಜತೆಗೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿದೆ. ದೇಶದ ಪ್ರತಿಯೊಬ್ಬರೂ ಸಂವಿಧಾನದಡಿಯಲ್ಲಿ ಜೀವಿಸುತ್ತಿದ್ದಾರೆ.

ಇಂತಹ ಸಂವಿಧಾನವನ್ನು ವಿಶ್ವವೇ ಒಪ್ಪಿಕೊಂಡಿದ್ದು, ಸಾಕಷ್ಟು ದೇಶಗಳಲ್ಲಿಯೂ ನಮ್ಮ ಸಂವಿಧಾನದ ಕೆಲವೊಂದು ಅಂಶಗಳು ಪಾಲನೆಯಲ್ಲಿವೆ ಎಂಬುದು ಭಾರತೀಯರ ಹೆಮ್ಮೆ. ಹೀಗಿರುವಾಗ ಕೆಲವು ಮಠಾಧಿಪತಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಅನ್ಯ ಸಮುದಾಯಗಳಿಗೆ ಮತದಾನದ ಹಕ್ಕು ನೀಡಬಾರದು ಎನ್ನುವುದು, ನಮಗೆ ಪ್ರತ್ಯೇಕ ಸಂವಿಧಾನ ಬೇಕು ಎಂದು ಬೇಡಿಕೆ ಇಡುವುದು ಎಷ್ಟು ಸರಿ? ಇಂತಹ ಹೇಳಿಕೆಗಳು ಜನಾಂಗೀಯ ದ್ವೇಷಕ್ಕೆ ಕಾರಣವಾಗಬಹುದು. ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯುಂಟು ಮಾಡಬಹುದು. ಆದ್ದರಿಂದ ಧಾರ್ಮಿಕ ಮುಖಂಡರು ಹಾಗೂ ಸ್ವಾಮೀಜಿಗಳು ಸಂವಿಧಾನ ಹಾಗೂ ಈ ನೆಲದ ಕಾನೂನಿನ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು.

ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ

Tags:
error: Content is protected !!