Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಓದುಗರ ಪತ್ರ| ರಸ್ತೆಗಳನ್ನು ಮರುಡಾಂಬರೀಕರಣ ಮಾಡಿ

ಕೊಳ್ಳೇಗಾಲದ ಪ್ರಮುಖ ರಸ್ತೆಗಳಾದ ಡಾ.ಬಿ.ಆರ್.ಅಂಬೇಡ್ಕ‌ರ್ ರಸ್ತೆ ಮತ್ತು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಈಗ ಮಳೆಗಾಲವಾದ್ದರಿಂದ ಈ ರಸ್ತೆಗಳಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಗಳು ಕಾಣದೆ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ಗುಂಡಿ ತಪ್ಪಿಸಲು ಹೋಗಿ ಅನೇಕ ಅಪಘಾತಗಳೂ ಸಂಭವಿಸಿರುವ ಉದಾಹರಣೆಗಳಿವೆ.

ಈ ಗುಂಡಿಗಳಲ್ಲಿ ಸದಾ ನೀರು ನಿಂತಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಎರಡೂ ರಸ್ತೆಗಳು ಕೊಳ್ಳೇಗಾಲದ ಪ್ರಮುಖ ರಸ್ತೆಗಳಾಗಿದ್ದು, ಇಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿರುವುದರಿಂದ ಇವು ಜನನಿಬಿಡ ಪ್ರದೇಶಗಳೂ ಆಗಿವೆ. ಹೀಗಾಗಿ ಇಲ್ಲಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಈ ವೇಳೆ ವಾಹನಗಳು ಚಲಿಸಿದಂತೆಲ್ಲ ಗುಂಡಿಗಳಲ್ಲಿನ ನೀರು ಪಾದಚಾರಿಗಳಿಗೆ ಎರಚುತ್ತಿದ್ದು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಈ ರಸ್ತೆಗಳನ್ನು ಮರುಡಾಂಬರೀಕರಣ ಮಾಡಬೇಕಿದೆ.

– ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags:
error: Content is protected !!