ಮುಂಬರುವ ಪಠ್ಯಪುಸ್ತಕ ತಯಾರಿ ಅಥವಾ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಸಾಧನೆಗಳ ಕುರಿತ ವಿಷಯಗಳನ್ನು ಸೇರಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ದೃಢಪಡಿಸಿರುವುದು ಸ್ವಾಗತಾರ್ಹ. ಬಾಲನಟನಿಂದ ಲೋಕೋಪಕಾರಿ ಮತ್ತು ಮೌಲ್ಯಗಳಿಗೆ ಹೆಸರುವಾಸಿಯಾದ ಸಾಮಾಜಿಕ ಪ್ರಜ್ಞೆಯ ವ್ಯಕ್ತಿಯಾಗುವ ಅಸಾ ಧಾರಣ ವ್ಯಕ್ತಿತ್ವದ ಪಯಣ ಭವಿಷ್ಯದ ಪೀಳಿಗೆಗೆ ಸ್ಛೂರ್ತಿ ನೀಡುವ ರೀತಿ ಇದ್ದು, ಅದು ಮಕ್ಕಳಿಗೆ ಉತ್ತಮ ಅಧ್ಯಯನ ವಿಷಯವಾಗಿದೆ.
ಪುನೀತ್ ಅವರ ಜೀವನವು ಶಿಸ್ತು, ಶ್ರಮ, ಸರಳತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕ. ಪುನೀತ್ ಅವರು ಭೌತಿಕವಾಗಿ ಇಲ್ಲವಾದರೂ ಅವರ ಸಾಧನೆ ಮತ್ತು ಮೌಲ್ಯಗಳು ಇಂದಿಗೂ ಕೋಟ್ಯಂತರ ಕನ್ನಡಿಗರಿಗೆ ಸೂರ್ತಿಯಾಗಿವೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಅವರು ಸಿನಿಮಾ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ, ದಾನ ಕಾರ್ಯಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕವೂ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ಅಪ್ಪು ಅವರ ಜೀವನ ಪಾಠಗಳು ಮುಂದಿನ ಪೀಳಿಗೆಯ ಮಕ್ಕಳಿಗೆ ದಾರಿದೀಪವಾಗಲಿ.
– ಹರಳಹಳ್ಳಿ ಪುಟ್ಟರಾಜು,ಪಾಂಡವಪುರ



