ಕಳೆದ ೨೦೨೪ರ ಆ.೩೦ರಂದು ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತು. ಅದರ ಪ್ರಕಾರ ಅನುಭವಿ ಅತಿಥಿ ಉಪನ್ಯಾಸಕರಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಅಧಿಸೂಚನೆಯ ಅನ್ವಯ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಮುನ್ನವೇ ೨೦೨೪ರ ಸೆ.೧೨ರಂದು ರಾಜ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಯುಜಿಸಿ ಅರ್ಹತೆ ಉಳ್ಳವರನ್ನು ಮಾತ್ರ ಅತಿಥಿ ಉಪನ್ಯಾಸಕರಾಗಿ ನೇಮಿಸಿಕೊಳ್ಳಬೇಕು ಎಂದು ಆದೇಶಿಸಿತು.
ಆದರೆ ರಾಜ್ಯ ಉನ್ನತ ಶಿಕ್ಷಣ ಸಚಿವರು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಯುಜಿಸಿ ಅನರ್ಹ ಅಭ್ಯರ್ಥಿಗಳ ಪರವಾಗಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಆದರೆ ಉಚ್ಚ ನ್ಯಾಯಾಲಯದ ಬಹುಸದಸ್ಯ ಪೀಠವೂ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಿತು. ಇದಾದ ಬಳಿಕ ೨೦೨೫ರ ಜ.೨ರಂದು ಯುಜಿಸಿ ಅರ್ಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತು. ಆದರೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಕೌನ್ಸಿಲಿಂಗ್ ಆರಂಭವಾಗುವ ಮುನ್ನವೇ ಉನ್ನತ ಶಿಕ್ಷಣ ಸಚಿವರ ಸಹಕಾರದಿಂದಲೋ ಏನೋ ಅನರ್ಹ ಅತಿಥಿ ಉಪನ್ಯಾಸಕರು ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಬೆಂಗಳೂರು ಹಾಗೂ ಧಾರವಾಡ ನ್ಯಾಯಾಲಯಗಳ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಅನರ್ಹ ಅಭ್ಯರ್ಥಿಗಳಿಗೆ ಯುಜಿಸಿ ಅರ್ಹತೆ ಪಡೆದುಕೊಳ್ಳಲು ಮೂರು ವರ್ಷಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆ ಕಾಲಾವಕಾಶ ಜ.೧೩ಕ್ಕೆ ಮುಗಿದು ಹೋಗಿದೆ. ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಯುಜಿಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರ ಸುಲಭವಾಗಿ ಈ ತಡೆಯಾಜ್ಞೆಯನ್ನು ತೆರವುಗೊಳಿಸಬಹುದು. ಆದರೆ ಉನ್ನತ ಶಿಕ್ಷಣ ಸಚಿವರು ತಡೆಯಾಜ್ಞೆಯನ್ನು ತೆರವುಗೊಳಿಸುವ ಬದಲು ಯುಜಿಸಿ ಅರ್ಹತಾ ಅಭ್ಯರ್ಥಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅನರ್ಹರನ್ನು ಅತಿಥಿ ಉಪನ್ಯಾಸಕರಾಗಿ ಮುಂದುವರಿಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರ ಈ ವರ್ತನೆಯಿಂದ ಅರ್ಹ ಅಭ್ಯರ್ಥಿಗಳು ಬೇಸತ್ತು ಹೋಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಗಮನಹರಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ.
-ಎಂ.ಆರ್.ಮಹೇಶ, ಮುಳ್ಳೂರು, ಸರಗೂರು ತಾ





