ಪ್ರಸ್ತುತ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಅಕಾಲಿಕ ತುಂತುರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಸಾಕಷ್ಟು ಬೆಳೆಗಳು ಮಳೆಗೆ ಸಿಲುಕಿ ನಾಶವಾಗುತ್ತಿವೆ. ವರದಿಗಳ ಪ್ರಕಾರ ರಾಜ್ಯಾದ್ಯಂತ ಅಕಾಲಿಕ ಮಳೆಯಿಂದಾಗಿ ಮತ್ತು ಕೊರೆಯುವ ಚಳಿಗೆ ಕೊಯ್ಲಿಗೆ ಬಂದಿದ್ದ ರಾಗಿ, ಜೋಳ ಮತ್ತು ಹುರುಳಿ ಬೆಳೆಗಳು ಹೊಲದಲ್ಲೇ ಕೊಳೆಯುತ್ತಿದ್ದು, ರೈತರು ಸುಮಾರು ಶೇ.೪೦ ರಿಂದ ಶೇ.೫೦ರಷ್ಟು ಇಳುವರಿ ನಷ್ಟ ಅನುಭವಿಸಿದ್ದಾರೆ.
ಇಷ್ಟೆಲ್ಲಾ ಅವಾಂತರಗಳು ಸಂಭವಿಸುತ್ತಿದ್ದರೂ, ಸರ್ಕಾರ ಮತ್ತು ಕೃಷಿ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ವರ್ಷ ಹವಾಮಾನ ಬದಲಾವಣೆಯ ಅಂಕಿಅಂಶಗಳನ್ನು ನೀಡುವ ಸರ್ಕಾರ, ಸಂಕಷ್ಟದ ಸಮಯದಲ್ಲಿ ರೈತನ ಕೈಹಿಡಿಯಲು ವಿಫಲವಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಅಡಿಯಲ್ಲಿ ವಿಮೆ ಪಾವತಿಸಿದರೂ, ಬೆಳೆ ಸಮೀಕ್ಷೆಯ ನೆಪದಲ್ಲಿ ಪರಿಹಾರವನ್ನು ವಿಳಂಬ ಮಾಡುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರವು ಕೂಡಲೇ ಎಚ್ಚೆತ್ತು, ಕೇವಲ ಭರವಸೆಗಳನ್ನು ನೀಡದೆ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಮಾರ್ಗಸೂಚಿಗಳ ಅನ್ವಯ ತುರ್ತು ಪರಿಹಾರವನ್ನು ಘೋಷಿಸಬೇಕು.
-ಡಾ. ಎಚ್.ಕೆ.ವಿಜಯಕುಮಾರ, ಬೆಂಗಳೂರು



