ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದೆ.
ಆದರೆ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸಿದ ಬಳಿಕ ಗ್ಯಾರಂಟಿ ಯೋಜನೆ ಗಳಿಗಾಗಿ ಹಣ ಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಜತೆಗೆ, ಬಸ್ ಟಿಕೆಟ್ ದರ ವನ್ನೂ ಏರಿಕೆ ಮಾಡಿದೆ. ಇದರಿಂದಾಗಿ ಪುರುಷ ಪ್ರಯಾಣಿಕರು ದಂಡ ತೆರುವಂತಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ೩ ಬಾರಿ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿರುವ ಜತೆಗೆ ಗ್ರಾಮೀಣ ಭಾಗಗಳಿಗೆ ಬಸ್‌ಗಳ ಸಂಖ್ಯೆಯನ್ನೂ ಕಡಿಮೆ ಮಾಡಿದೆ. ಇದಲ್ಲದೆ ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಹ ಪ್ರಯಾಣಿಕರಿಗೆ ಬಸ್‌ನಲ್ಲಿ ಸ್ಥಳಾವಕಾಶವೇ ಇಲ್ಲದಂತಾಗಿದೆ.
ಮುಖ್ಯವಾಗಿ ಗ್ರಾಮೀಣ ಭಾಗಗಳಿಗೆ ಬಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ನಿಗದಿತ ಸಮಯಕ್ಕೆ ಬಸ್ ಬಾರದೆ, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಹಿರಿಯ ನಾಗರಿಕರು ಪರದಾಡುವಂತಾಗಿದೆ.
ಅಲ್ಲದೆ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು ಮತ್ತು ಕೆಲಸಕ್ಕೆ ತೆರಳುವುದಕ್ಕೆ ಸಾಧ್ಯ ವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಬಸ್ ಟಿಕೆಟ್ ದರ ಏರಿಸುವ ಕಡೆಯೇ ಹೆಚ್ಚು ಗಮನ ನೀಡದೆ, ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕಿದೆ.
-ಎಂ.ಚೈತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಹಾರಾಜ ಕಾಲೇಜು, ಮೈಸೂರು.