ಮೈಸೂರಿನ ರೈಲು ನಿಲ್ದಾಣದಲ್ಲಿ ಸೇವೆ ನೀಡುವ ಆಟೋ ಚಾಲಕರು ಪ್ರಯಾಣಿಕರಿಂದ ರಾತ್ರಿ ೧೦ ಗಂಟೆಯ ನಂತರ ಕನಿಷ್ಠ ಪ್ರಯಾಣದರವನ್ನು ೨೫೦-೩೦೦ ರೂ. ಪಡೆಯುತ್ತಿದ್ದಾರೆ ಹಾಗೂ ದೂರವಿದ್ದಲ್ಲಿ ೫೦೦-೬೦೦ ರೂ.ವರೆಗೂ ಸುಲಿಗೆ ಮಾಡುತ್ತಿದ್ದಾರೆ. ಪ್ರಿ ಪೇಯ್ಡ್‌ಆಟೋ ಚಾಲಕರು ಪ್ರಯಾಣಿ ಕರನ್ನು ಆಟೋದಲ್ಲಿ ಹತ್ತಿಸಿಕೊಂಡು ನಿಗದಿತ ಸ್ಥಳಕ್ಕೆ ತಲುಪಿದ ಮೇಲೆ ಚೀಟಿಯಲ್ಲಿರುವ ಹಣಕ್ಕಿಂತ ೩೦ ರಿಂದ ೫೦ ರೂ. ಹೆಚ್ಚು ಹಣಕ್ಕಾಗಿ ಪೀಡಿಸುವುದು ಸರಿಯಲ್ಲ. ಮತ್ತೊಂದು ಕಡೆ ಓಲಾ, ಊಬರ್ ಮೊದಲಾದ ಆಪ್ ಆಧಾರಿತ ಆಟೋ ಚಾಲಕರು ರಾತ್ರಿ ೯ ಗಂಟೆಯ ನಂತರ ಎಷ್ಟೇ ಸಲ ಬುಕಿಂಗ್ ಮಾಡಿದರೂ ರೈಲು ನಿಲ್ದಾಣದತ್ತ ಮುಖ ಮಾಡದಿರುವುದರಿಂದ ರಾತ್ರಿ ವೇಳೆ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ತಮ್ಮ ಮನೆಯನ್ನು ತಲುಪಲು ಪರದಾಡುವಂತಾಗಿದೆ.
ಪೊಲೀಸರು ಹಾಗೂ ರೈಲ್ವೆ ಇಲಾಖೆಯವರು ರೈಲು ನಿಲ್ದಾಣದ ಬಳಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜನರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಆರ್. ಯಶಸ್, ಮೈಸೂರು





