Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ: ನದಿಗಳ ಸ್ವಚ್ಛತೆ ಕಾಪಾಡಿ

ರಾಜ್ಯದ ಕಾವೇರಿ, ಕಪಿಲ, ತುಂಗಭದ್ರಾ, ಕೃಷ್ಣೆ, ಗೋದಾವರಿ ನದಿಗಳ ಪಕ್ಕದಲ್ಲೇ ಅನೇಕ ತೀರ್ಥಕ್ಷೇತ್ರಗಳಿವೆ. ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರು ಈ ನದಿಗಳಲ್ಲಿ ಸ್ನಾನ ಮಾಡಿ ಅಥವಾ ಕೈ-ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ದೇವಾಲಯಗಳಿಗೆ ಹೋಗುವ ಪದ್ಧತಿ ಇದೆ. ಇನ್ನು ಕೆಲವರು ದಂಡೆಯ ಮೇಲೆ ನದಿಗೆ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ಪೂಜೆ ಸಾಮಗ್ರಿಗಳನ್ನು ತರುವ ಪ್ಲಾಸ್ಟಿಕ್ ಕವರ್, ಗಂಧದಗಡ್ಡಿ, ಕರ್ಪೂರ, ಅರಿಶಿನ, ಕುಂಕುಮ ಸೇರಿದಂತೆ ಅನೇಕ ತ್ಯಾಜ್ಯಗಳನ್ನು ನದಿಗೆ ಬೀಸಾಡುತ್ತಿದ್ದು, ನದಿಗಳು ಕಲುಷಿತವಾಗುತ್ತಿವೆ.

ಇದು ಒಂದೆಡೆಯಾದರೆ, ಮತ್ತೊಂದೆಡೆ, ನದಿಯ ದಂಡೆಯ ಮೇಲೆಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದು, ನದಿಯ ಅಂಚಿನಲ್ಲಿ ಮದ್ಯದ ಕೂಟಗಳನ್ನು ಮಾಡಿ ಬಾಟಲಿ, ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲಿಯೇ ಬೀಸಾಡಿ ಹೋಗುತ್ತಿದ್ದಾರೆ. ಇದೂ ಕೂಡ ನದಿಗಳು ಕಲುಷಿತಗೊಳ್ಳಲು ಕಾರಣವಾಗಿದೆ. ಇಂತಹ ಕಲುಷಿತ ನದಿಗಳಲ್ಲಿ ದೇವಾಲಯಕ್ಕೆ ಬರುವ ಭಕ್ತರು ಸ್ನಾನ ಮಾಡುವುದರಿಂದ ಅವರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಅಲ್ಲದೆ ಜಲಚರಗಳಿಗೂ ಹಾನಿಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ಹಾಗೂ ನದಿಗಳ ಅಂಚಿನಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. -ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags: