ಬಂಡೀಪುರ ಅಭಯಾರಣ್ಯದ ನಡುವೆ ಹಾದು ಹೋಗಿರುವ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ತೆರವು ಬೇಡ ಎಂದು ಚಾಮರಾಜನಗರದಲ್ಲಿ ಪರಿಸರವಾದಿಗಳು ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ.ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದ ಅರಣ್ಯಗಳಲ್ಲಿ ಹುಲಿಗಳ ಸಂತತಿ ಕ್ಷೀಣಿಸುತ್ತಾ ಬಂದಿರುವುದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಗೊತ್ತಿದ್ದರೂ, ಇತ್ತೀಚೆಗೆ ದಿಲ್ಲಿಯಲ್ಲಿ ಬಂಡೀಪುರ ಪ್ರದೇಶದಲ್ಲಿ ಹಾದು ಹೋಗುವ ಎರಡು ಹೆದ್ದಾರಿಗಳಲ್ಲಿ ರಾತ್ರಿ ಸಂಚಾರ ನಿಷೇಧ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು ಮುಖ್ಯಮಂತ್ರಿ ಜೊತೆ ಸಮಾ ಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿರುವುದು ತುಂಬಾ ಬೇಸರದ ವಿಷಯ. ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಅವರು ಲೋಕಸಭಾ ಉಪಚುನಾವಣೆ ವೇಳೆ ಜನತೆಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸುವ ಸಲುವಾಗಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ವನ್ಯಜೀವಿಗಳ ನೆಮ್ಮದಿಗೆ ಭಂಗ ಬರಲಿದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಜ್ಯ ಸರ್ಕಾರ ಯಾರ,ಯಾವ ಒತ್ತಡಕ್ಕೂ ಮಣಿಯದೆ, ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮುಂದುವರಿಸುವುದು ಸೂಕ್ತ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.





