ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮೈಸೂರು- ಹುಣಸೂರು ರಸ್ತೆಯ ಹಿನಕಲ್ ಭಾಗದಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳುಗಳೇ ಕಳೆದಿದ್ದು, ಕಗ್ಗತ್ತಲು ಆವರಿಸಿದೆ.
ಮೈಸೂರು ನಗರಪಾಲಿಕೆಯ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳಾಗಲೀ ಇತ್ತ ಗಮನ ಕೊಡದೆ ನಿರ್ಲಕ್ಷ ವಹಿಸುತ್ತಿರುವುದು ವಿಪರ್ಯಾಸವೇ ಸರಿ. ಐಶ್ವರ್ಯ ಪೆಟ್ರೋಲ್ ಬಂಕ್‌ನಿಂದ ಹೂಟಗಳ್ಳಿ ಸಿಗ್ನಲ್‌ವರೆಗೂ ಇದೇ ಸಮಸ್ಯೆ ಇದ್ದು, ಜನರು ಕಗ್ಗತ್ತಲಿನಲ್ಲಿಯೇ ಓಡಾಡಬೇಕಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ದಿನದ ೨೪ ಗಂಟೆಯೂ ವಾಹನ ದಟ್ಟಣೆ ಇರುವುದರಿಂದ ಸಂಜೆಯ ವೇಳೆ ಜನರು ಹಿನಕಲ್, ಹೂಟಗಳ್ಳಿ ಅಥವಾ ಬೆಳವಾಡಿಯ ಕಡೆಗೆ ತೆರಳಲು ಈ ಹೆದ್ದಾರಿಯನ್ನು ದಾಟಬೇಕಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿಯೇ ರಸ್ತೆ ದಾಟಬೇಕಿದೆ. ಹೆದ್ದಾರಿಯಲ್ಲೇ ಬೀದಿ ದೀಪಗಳು ಕೆಟ್ಟು ನಿಂತರೆ, ಇನ್ನು ಇತರೆ ರಸ್ತೆಗಳ ಪಾಡೇನು? ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಿ ಬೀದಿ ದೀಪಗಳನ್ನು ಸರಿಪಡಿಸಬೇಕಿದೆ.
–ಆರ್.ಯಶಸ್, ವಿಜಯನಗರ, ಮೈಸೂರು.





