ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು, ವೀಕ್ಷಿಸುವುದು, ಹಂಚಿಕೊಳ್ಳುವುದು ಮಾತ್ರವಲ್ಲದೆ ಅವುಗಳನ್ನು ಯಾವುದೇ ಡಿಜಿಟಲ್ ಸಾಧನಗಳಲ್ಲಿ ಶೇಖರಿಸಿಟ್ಟುಕೊಳ್ಳುವುದೂ ಪೋಕ್ಸೊ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ.
ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದು, ಲೈಂಗಿಕ ಆಸಕ್ತಿಗಳನ್ನು ಅವರಲ್ಲಿ ಬಿಂಬಿಸಿ ಅವುಗಳನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಇತರೆ ಫೋರ್ನ್ ವೆಬ್‌ಸೈಟ್‌ಗಳಲ್ಲಿ ಹಂಚುವುದು ನಿಜಕ್ಕೂ ಬಹುದೊಡ್ಡ ಅಪರಾಧ. ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯಗಳು ಅವರಲ್ಲಿ ಸೈಕೋಪಥಾಲಜಿ ಸೇರಿದಂತೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಬೀರುತ್ತವೆ. ಖಿನ್ನತೆ, ಆತಂಕ, ಅಸ್ವಸ್ಥತೆ, ನಿದ್ರಾಭಂಗ ಸೇರಿದಂತೆ ಅವರು ಆಘಾತದಲ್ಲಿಯೇ ಬದುಕು ದೂಡುವಂತಾಗಬಹುದು.
ಅಲ್ಲದೆ ಆ ಮಗು ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಲು ಹಿಂಜರಿಯುವಂತೆ ಮಾಡಿರುತ್ತದೆ. ಅಲ್ಲದೆ ಮಕ್ಕಳ ದೈಹಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿ ಅವರು ವಿವಿಧ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುಳರಿಗೆ ಕಾನೂನಿನಡಿ ತಕ್ಕ ಶಿಕ್ಷೆ ಆಗಲೇಬೇಕಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಉತ್ತಮವಾದ ತೀರ್ಪನ್ನೇ ನೀಡಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ