ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಂಬಿನಾಂಶವನ್ನು ಬಳಕೆ ಮಾಡಿರುವ ಅಂಶ ಬಹಿರಂಗಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿಯೂ ನಂದಿನಿ ತುಪನ್ನೇ ಬಳಸಿ ಪ್ರಸಾದ ತಯಾರಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೊಂದು ಸ್ವಾಗತಾರ್ಹ ಕ್ರಮ. ಕೆಲ ದಿನಗಳ ಹಿಂದೆ ನಾವು ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆಂದು ತೆರಳಿದ್ದಾಗ ಲಾಡು ಖರೀದಿಸಿ ತಂದಿದ್ದೆ. ಆದರೆ ಆ ಲಾಡು ಮನೆಗೆ ತರುವ ವೇಳೆಗಾಗಲೇ ಕಡ್ಲೆಹಿಟ್ಟಿನ ಉಂಡೆಯಂತಾಗಿದ್ದು, ಅದನ್ನು ತಯಾರಿಸಿ ಸಾಕಷ್ಟು ದಿನಗಳಾಗಿರಬಹುದು ಎಂಬ ಅನುಮಾನ ಕಾಡಿತ್ತು. 25 ರೂ. ನೀಡಿ ಖರೀದಿಸಿದ ಲಾಡು ಪೊಟ್ಟಣದ ಮೇಲೆ ಅದರ ದರವಾಗಲಿ, ತಯಾರಿಸಿದ ದಿನಾಂಕವನ್ನಾಗಲಿ ನಮೂದಿಸಿರಲಿಲ್ಲ. ಇದು ಕೇವಲ ಮಹದೇಶ್ವರ ಬೆಟ್ಟದಲ್ಲಿ ಮಾತ್ರವಲ್ಲ. ಚಾಮುಂಡಿಬೆಟ್ಟ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಗಳಲ್ಲೂ ಇದೇ ಪರಿಸ್ಥಿತಿ ಇದೆ. ಎಲ್ಲ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಯನ್ನು ಗುತ್ತಿಗೆಗೆ ವಹಿಸುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳುವಂತೆ ಇಲಾಖೆ ಸೂಚನೆ ನೀಡಬೇಕಿದೆ.
-ಬಿ.ಎಂ.ಭ್ರಮರಾಂಬ, ಕನಕದಾಸನಗರ, ಮೈಸೂರು.