Mysore
23
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಓದುಗರ ಪತ್ರ: ಭವಿಷ್ಯದಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಿರಲಿ

ಓದುಗರ ಪತ್ರ

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದ ೧೧ ಮಂದಿ ಮೃತಪಟ್ಟು, ನೂರಾರು ಜನ ಗಾಯಗೊಂಡ ಪ್ರಕರಣ ಹೃದಯ ವಿದ್ರಾವಕವಾಗಿದೆ. ರಾಜ್ಯಸರ್ಕಾರದ ವಿಫಲತೆಯೇ ಇಂತಹ ದುರ್ಘಟನೆ ನಡೆಯಲು ಕಾರಣವೆಂದು ಯಥಾಪ್ರಕಾರ ವಿರೋಧ ಪಕ್ಷಗಳು ಟೀಕಿಸಿವೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ರಾಜ್ಯಸರ್ಕಾರ ಈಗಾಗಲೇ ಘೋಷಿಸಿದ್ದು, ಇಡೀ ಘಟನೆಯನ್ನು ವಿಚಾರಣೆಗೆ ಒಳಪಡಿಸಲು ನ್ಯಾ.ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನು ರಚಿಸಿದೆ. ಘಟನೆ ತುಂಬಾ ಗಂಭೀರವಾಗಿರುವುದರಿಂದ ರಾಜ್ಯಸರ್ಕಾರ ಬೆಂಗಳೂರಿನ ಪೊಲೀಸ್ ಆಯುಕ್ತರಾದ ದಯಾನಂದ್ ಸೇರಿದಂತೆ ಕೆಲವು ಮುಖ್ಯ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿದೆ. ಜೊತೆಗೆ ಎಫ್‌ಐಆರ್ ಆಧಾರದ ಮೇಲೆ ಸಿಐಡಿ ತನಿಖೆಗೂ ಆದೇಶಿಸಲಾಗಿದೆ. ಈ ಮಧ್ಯೆ ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡಿರುವ ರಾಜ್ಯದ ಉಚ್ಚ ನ್ಯಾಯಾಲಯ, ರಾಜ್ಯಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಮತ್ತೊಂದು ಕಡೆ, ಈ ಪ್ರಕರಣದಲ್ಲಿ ಬಹುತೇಕರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ. ಈ ದುರ್ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. ಯಾರು ಏನೇ ಹೇಳಿದರೂ, ಟೀಕೆ ಮಾಡಿದರೂ ಆಗಬಾರದ್ದು ಆಗಿಹೋಗಿದೆ. ಸತ್ತವರನ್ನು ಬದುಕಿಸುವ ಸಾಮರ್ಥ್ಯ ಯಾರಲ್ಲೂ ಇಲ್ಲ. ಆದರೂ ಇಂತಹ ಸಂದರ್ಭಗಳಲ್ಲಿ ಕಠಿಣ ಮತ್ತು ಕಠೋರವಾದ ಮಾತುಗಳು ಬರುವುದು ಸಹಜ. ಘಟನೆಯ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ಮಾಡಿರುವುದರಿಂದ ತಪ್ಪಿತಸ್ಥರ ಮೇಲೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ರಾಜ್ಯ ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುವುದು ಒಳ್ಳೆಯದು.

-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!