Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ದಸರಾ ದುಬಾರಿಯಾಗದಿರಲಿ

ಓದುಗರ ಪತ್ರ

ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಸೆ.೨೨ ರಿಂದ ಆರಂಭವಾಗಿದ್ದು, ಅಕ್ಟೋಬರ್ ೨ ರವರೆಗೆ ಅದ್ಧೂರಿಯಾಗಿ ಜರುಗಲಿದೆ. ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಸುಮಾರು ೬೦ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಅನೇಕ ಜನಾಕರ್ಷಣೀಯ ಮತ್ತು ಮನರಂಜನಾ ಕಾರ್ಯಕ್ರಮಗಳ ಪ್ರವೇಶ ಶುಲ್ಕ ದುಬಾರಿಯಾಗಿರುವುದು ಜನರಲ್ಲಿ ಬೇಸರ ತರಿಸಿದೆ. ಈ ಬಾರಿಯೂ ಯುವ ದಸರಾ ವೀಕ್ಷಣೆಗೆ ದರ ನಿಗದಿ ಮಾಡಿದ್ದು, ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ಒಟ್ಟಾರೆ ೨೦ ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಈ ಪೈಕಿ ೫ ಸಾವಿರ ರೂ. ಟಿಕೆಟ್ ಹಾಗೂ ೨,೫೦೦ ರೂ. ಟಿಕೆಟ್‌ಗಳಿಗೆ ರೂ.೫೦೦ ಆಸನಗಳ ಗ್ಯಾಲರಿಗಳಲ್ಲಿ ಸ್ಥಳ ವ್ಯವಸ್ಥೆಗೊಳಿಸಲಾಗಿದೆ. ಇದಲ್ಲದೆ ಅಂಬಾರಿ ಬಸ್ ಪ್ರಯಾಣ ದರ ರೂ. ೫೦೦, ದಸರಾ ಗೋಲ್ಡ್ ಕಾರ್ಡ್‌ಗೆ ರೂ. ೬,೫೦೦. ಜಂಬೂಸವಾರಿ ವೀಕ್ಷಣೆಗೆ ರೂ.೩,೫೦೦. ಪಂಜಿನ ಕವಾಯತು ವೀಕ್ಷಣೆ ರೂ.೧೫೦೦. ಡ್ರೋನ್ ಶೋಗೆ ರೂ. ೧೫೦೦. ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ರೂ. ೫೦ ನಿಗದಿ ಮಾಡಲಾಗಿದ್ದು ಈ ಬಾರಿಯೂ ದಸರಾ ವೀಕ್ಷಣೆಯು ತುಂಬಾ ದುಬಾರಿಯಾಗಿದೆ ಎಂದು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ರಾಜಕೀಯ ಮುಖಂಡರ ಹಿಂಬಾಲಕರಿಗೆ ಮಾತ್ರ ಉಚಿತ ಪಾಸ್‌ಗಳು ದೊರಕುತ್ತಿದ್ದು, ಸಾಮಾನ್ಯ ಜನರಿಗೆ ದಸರಾ ವೀಕ್ಷಣೆ ಅಸಾಧ್ಯವಾಗಿದೆ.

ನಾಡಿನ ವಿವಿಧ ಮೂಲೆಗಳಿಂದ ಆಗಮಿಸುವ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ. ಈಗಾಗಲೇ ಟಿಕೆಟ್ ದರದ ಹೆಚ್ಚಳದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ದಸರಾ ನಡೆಸುವುದು ದುಡ್ಡಿಗಾಗಿಯೇ ಎಂಬ ಮನೋಭಾವನೆ ಸಾರ್ವಜನಿಕರಲ್ಲಿ ಮನೆ ಮಾಡುತ್ತಿದೆ. ಆದ್ದರಿಂದ ಈ ಬಾರಿಯ ದಸರಾವು ದುಬಾರಿಯಾಗದೆ ಜನಸಾಮಾನ್ಯರ ದಸರಾವಾಗಲಿ ಎಂಬುದೇ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿದೆ.

 -ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾ

Tags:
error: Content is protected !!