ನಂಜನಗೂಡು ತಾಲ್ಲೂಕು, ಕೂಡ್ಲಾಪುರ ಗ್ರಾಮದಲ್ಲಿ ಸುಮಾರು ೧೨ ಲಕ್ಷ ರೂ.ಗಳ ವೆಚ್ಚದಲ್ಲಿ ೫ ವರ್ಷದ ಹಿಂದೆ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮಪಂಚಾಯಿತಿಯಿಂದ ಕಟ್ಟಡ ನಿರ್ಮಾಣ ಪರವಾನಗಿ ಪಡೆದಿರುವುದಿಲ್ಲ. ಈ ಕಟ್ಟಡಕ್ಕೆ ಹೋಗುವುದಕ್ಕೆ, ಬರುವುದಕ್ಕೆ ರಸ್ತೆಯೂ ಇಲ್ಲ. ಕೊಳಚೆ ಪ್ರದೇಶದಲ್ಲಿ ಈ ಭವನವನ್ನು ನಿರ್ಮಿಸಲಾಗಿದ್ದು, ೩-೪ ತಿಂಗಳಿಗೊಮ್ಮೆ ಸುತ್ತಲೂ ಗಿಡಗಂಟಿ ಬೆಳೆದು ಇದನ್ನು ತೆಗೆಸುವುದಕ್ಕೆ ೨ ಬಾರಿ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ.
ಗ್ರಾಮದ ಮಹಿಳೆಯರು ಬಯಲು ಶೌಚಕ್ಕೆ ಅಂಬೇಡ್ಕರ್ ಭವನದ ಆವರಣವನ್ನು ಉಪಯೋಗಿಸುತ್ತಿದ್ದಾರೆ. ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭವೂ ಅಧಿಕೃತವಾಗಿ ನಡೆದಿಲ್ಲ. ಈ ವಿಷಯವನ್ನು ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರಿಗೆ ತಿಳಿಸಲಾಗಿದ್ದು, ಲೋಕಾಯುಕ್ತ ವೃತ್ತ ನಿರೀಕ್ಷಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟವರು ಕೂಡಲೇ ಭವನಕ್ಕೆ ರಸ್ತೆ ಸೌಲಭ್ಯ ಕಲ್ಪಿಸುವುದರೊಂದಿಗೆ ಸಾರ್ವಜನಿಕ ಸಮಾರಂಭಗಳಿಗೆ ಈ ಭವನ ಬಳಕೆಯಾಗುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
-ಮಹದೇವಯ್ಯ, ಕೂಡ್ಲಾಪುರ, ನಂಜನಗೂಡು ತಾ.





