ಇತ್ತೀಚೆಗೆ ಅನೇಕ ಶಾಲೆಗಳು ಶಿಕ್ಷಣದ ನಿಜವಾದ ಅರ್ಥವನ್ನು ಸಂಪೂರ್ಣ ಮರೆತಿವೆ. ಎಸ್‌ಯುಪಿಡಬ್ಲ್ಯು (ಸಾಮಾಜಿಕವಾಗಿ ಉಪಯುಕ್ತ ಉತ್ಪಾದಕ ಕೆಲಸ) ಮತ್ತು ಕ್ರೀಡಾ ಚಟುವಟಿಕೆಗಳು ಪಠ್ಯಕ್ರಮದ ಅವಿಭಾಜ್ಯ ಭಾಗವಾಗಿದ್ದರೂ, ಬಹುತೇಕ ಶಾಲೆಗಳು ಇವುಗಳನ್ನು ಕೇವಲ ‘ಔಪಚಾರಿಕ’ದಂತೆ ನೋಡುತ್ತಿವೆ ಎಂಬ ವರದಿ ನೋವುಂಟು ಮಾಡುತ್ತದೆ. ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ತುಂಬಿ ಪರೀಕ್ಷಾ ಅಂಕಗಳ ಹಿಂದೆ ಓಡಿಸುವುದು ಸರಿಯಲ್ಲ. ಎಸ್‌ಯುಪಿ ಡಬ್ಲ್ಯು ಮೂಲಕ ಮಕ್ಕಳಲ್ಲಿ ಶ್ರಮದ ಘನತೆ, ಕೌಶಲ ಮತ್ತು ಸ್ವಾವಲಂಬನೆ ಬೆಳೆಸಬೇಕು.
ಮಕ್ಕಳಿಗೆ ದಿನವೂ ಕನಿಷ್ಠ ಅರ್ಧಗಂಟೆ ಆಟದ ಸಮಯ ನೀಡಲು ಶಾಲೆಗಳು ಮುಂದಾಗುತ್ತಿಲ್ಲ. ಪಾಠದ ಒತ್ತಡದಲ್ಲಿ ಮಕ್ಕಳು ಉಸಿರಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಶಿಕ್ಷಣದಿಂದ ಅವರ ಆರೋಗ್ಯವೂಹಾಳಾಗುತ್ತದೆ. ಶಿಕ್ಷಣ ಇಲಾಖೆ ಇಂತಹ ಶಾಲೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಎಸ್‌ಯು ಪಿ ಡಬ್ಲ್ಯು ಮತ್ತು ಕ್ರೀಡಾ ಚಟುವಟಿಕೆಗಳನ್ನು ಕಡ್ಡಾಯಗೊಳಿಸುವ ಕಾನೂನು ತರಬೇಕು. ಇಲ್ಲವಾದರೆ ಮುಂದಿನ ಪೀಳಿಗೆಯ ದೈಹಿಕ ಹಾಗೂ ಕ್ಷೀಣಿಸುತ್ತದೆ.
ನಿಜವಾದ ಶಿಕ್ಷಣ ಎಂದರೆ ಜೀವನಕ್ಕೆ ತಯಾರು ಮಾಡುವುದು. ಪರೀಕ್ಷೆಗಲ್ಲ. ಇದನ್ನು ಮರೆಯುತ್ತಿರುವ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕಠಿಣಕ್ರಮ ಕೈಗೊಳ್ಳುವುದು ಅಗತ್ಯ.
-ಡಾ. ಎಚ್. ಕೆ.ವಿಜಯಕುಮಾರ್, ಬೆಂಗಳೂರು





