ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಶುರುವಾಗಿ ತಿಂಗಳೇ ಕಳೆದರೂ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯುದ್ಧದ ಭೀಕರತೆ ದಿನೇ ದಿನೇ ಹೆಚ್ಚುತ್ತಿದೆ. ಯಾರೂ ಕೂಡ ಸೋಲುವಂತೆಯೂ ಕಾಣುತ್ತಿಲ್ಲ. ಈ ಕಠಿಣ ಸನ್ನಿವೇಶದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ದಿನವೂ ಗೊಂದಲಮಯ ಹೇಳಿಕೆ ಗಳನ್ನು ನೀಡುತ್ತಿದ್ದಾರೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವರ್ಚ ಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ನಾಯಕರುಗಳು ಯುದ್ಧಗಳನ್ನು ಅನಿವಾರ್ಯವಾಗಿಸುತ್ತಿರುವುದು ವಿಪರ್ಯಾಸ.
ಉಭಯ ದೇಶಗಳ ನಾಯಕರ ಸ್ವ ಪ್ರತಿಷ್ಠೆ ಮತ್ತು ಅಹಂಕಾರದಿಂದ ಮುಂದುವರಿಯುತ್ತಿರುವ ಈ ಯುದ್ಧವು ಸಂಕಷ್ಟದ ಹಾದಿಯಾಗಿದೆ. ಶಾಂತಿ ಮತ್ತು ಸಂಧಾನದ ಬದಲಿಗೆ ಅಹಂಕಾರಕ್ಕೆ ಮನ್ನಣೆ ನೀಡಿರುವುದ ರಿಂದ ಯುದ್ಧಗಳು ದೀರ್ಘಕಾಲದವರೆಗೆ ಮುಂದುವರಿಯುತ್ತಿವೆ. ಈ ಯುದ್ಧವು ಅನೇಕ ಅಮಾಯಕ ಜೀವಿಗಳೂ ಸೇರಿದಂತೆ ಜಗತ್ತಿನ ಆರ್ಥಿಕತೆ ಮತ್ತು ಮೂಲ ಸೌಕರ್ಯಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಬಡವರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗುತ್ತಿದೆ.
ಯುದ್ಧವು ಎಂದಿಗೂ ಶಾಶ್ವತ ಪರಿಹಾರವಲ್ಲ. ಬದಲಾಗಿ ಮಾತುಕತೆ ಮತ್ತು ಸೌಹಾರ್ದತೆಯಿಂದ ಮಾತ್ರ ಶಾಂತಿ, ಸಾಮರಸ್ಯ ಸಾಧ್ಯ. ಈ ನಿಟ್ಟಿನಲ್ಲಿ ಯುದ್ಧೋನ್ಮಾದವನ್ನು ತೋರುತ್ತಿರುವ ನಾಯಕರುಗಳು ಯುದ್ಧಮಂತ್ರವನ್ನು ಪಠಿಸುವುದನ್ನು ಬಿಟ್ಟರೆ ತಮ್ಮ ತಮ್ಮ ದೇಶದ ಜನರಿಗೆ ಹಾಗೂ ಜಗತ್ತಿಗೆ ಮಹದುಪಕಾರ ಮಾಡಿದಂತೆ ಹಾಗೂ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಘನಘೋರ ಪರಿಣಾಮಗಳನ್ನು ತಡೆಗಟ್ಟಿದಂತಾಗುತ್ತದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





