ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಿ ತಮ್ಮ ಪಕ್ಷದ ನಿಲುವನ್ನು ಪ್ರಸ್ತಾಪಿಸಬಹುದಿತ್ತು. ಆದರೆ ಅವರು ಸಭೆಯಲ್ಲಿ ಭಾಗಿಯಾಗದೆ ಮಾಧ್ಯಮಗಳ ಮುಂದೆ ‘ನಾನು ಗೋಡಂಬಿ, ದ್ರಾಕ್ಷಿತಿನ್ನಲುಸಭೆಗೆ ಹೋಗಬೇಕಿತ್ತಾ?’ ಎಂದು ವ್ಯಂಗ್ಯವಾಡಿರುವುದು ಸಮಂಜಸವಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ಧಕ್ಕೆಯಾದಾಗ ರಾಜ್ಯದ ಹಿತ ಕಾಯಲು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಒಟ್ಟಾಗಿ ಶ್ರಮಿಸಬೇಕು.
ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಅವರು ಕಾವೇರಿ ನೀರಿನ ವಿಚಾರ ಬಂದಾಗ ಪಕ್ಷ ಭೇದ ಮರೆತು ರಾಜ್ಯದ ಹಿತಾಸಕ್ತಿಗಾಗಿ ಮುತುವರ್ಜಿ ವಹಿಸಿದ್ದರು. ಅವರಂತೆ ಅನೇಕ ನಾಯಕರು ರಾಜ್ಯದ ಹಿತಕ್ಕಾಗಿ ಒಟ್ಟಾಗಿ ಶ್ರಮಿಸಿದ್ದಾರೆ. ಆದ್ದರಿಂದ ಈಗಿರುವ ನಾಯಕರೂ ಅವರಂತೆಯೇ ಒಂದಾಗಿ ಹೋರಾಡಬೇಕೇ ವಿನಾ ಪಕ್ಷಭೇದ ಮಾಡಿಕೊಂಡು ಪಲಾಯನ ಮಾಡಬಾರದು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





