ಡಿಸೆಂಬರ್ ೨೦ರಿಂದ ೨೨ರವರೆಗೆ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಹಿಂದಿನ ಸಮ್ಮೇಳನಗಳಲ್ಲಿ ಆದ ಪ್ರಮಾದಗಳು ಮರುಕಳಿಸದಿರಲಿ ಎಂಬುದು ಕನ್ನಡ ಸಾಹಿತ್ಯಾಸಕ್ತರ ಆಶಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕಳೆಗುಂದುತ್ತಿವೆ. ಸಾಹಿತ್ಯ ಸಮ್ಮೇಳನಗಳು ಎಂದರೆ ಜನರೇ ಸೇರುವುದಿಲ್ಲ. ಇನ್ನು ಕನ್ನಡದ ಉಳಿವಿಗೆ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳಂತೂ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿವೆಯೇ ವಿನಾ ಅವು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳು ಹಂತ ಹಂತವಾಗಿ ರಾಜಕಾರಣಿಗಳ ಹಿಡಿತಕ್ಕೆ ಜಾರುತ್ತಿವೆ. ಅವು ರಾಜಕೀಯ ವೇದಿಕೆಗಳಾಗಿ ಬದಲಾಗುತ್ತಿವೆ. ಸಮ್ಮೇಳನದ ವೇದಿಕೆಗಳಲ್ಲಿ ಸಾಹಿತ್ಯದ ವಿಚಾರಗಳಿಗಿಂತರಾಜಕೀಯ ಪ್ರೇರಿತ ವಿಚಾರಗಳೇ ತುಂಬಿರುತ್ತವೆ.
ಸರ್ಕಾರ ಸಾಹಿತ್ಯ ಸಮ್ಮೇಳನಗಳಿಗೆ ಕೋಟ್ಯಂತರ ರೂ. ವ್ಯಹಿಸಿದರೂ ಅಲ್ಲಿ ಸಾಹಿತ್ಯ ಪ್ರೇಮಿಗಳಿಗೆ ಸರಿಯಾದ ಊಟ, ಕುಡಿಯುವ ನೀರು, ವಸತಿಯಂತಹ ಮೂಲ ಸೌಕರ್ಯಗಳೇ ಇರುವುದಿಲ್ಲ. ಕಾರ್ಯಕ್ರಮಗಳೂ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುವುದಿಲ್ಲ. ಇದರಿಂದಾಗಿ ಸಾಹಿತ್ಯ ಸಮ್ಮೇಳನಗಳು ಎಂದರೆ ಜನರಿಗೆ ತಾತ್ಸರ ಭಾವನೆ ಇದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಕಳೆಗುಂದುತ್ತಿವೆ. ಆದ್ದರಿಂದ ಕಸಾಪ ಈ ಭಾರಿ ಮಂಡ್ಯದಲ್ಲಿ ನಡೆಸುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ಸಾಹಿತ್ಯ ಸಮ್ಮೇಳನಗಳ ಉದ್ದೇಶಗಳು ಜನರಿಗೆ ತಲುಪುವಂತೆ ಮಾಡಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ