ಲೋಕಸಭೆಯ ಉಪಾಧ್ಯಕ್ಷರ ಸ್ಥಾನ ೨೦೧೯ರಿಂದ ಖಾಲಿಯಾಗಿಯೇ ಉಳಿದಿರುವ ಬಗ್ಗೆ ಲೋಕಸಭಾಸದಸ್ಯರೊಬ್ಬರು ತೀವ್ರ ಕಳವಳ ವ್ಯಕ್ತ ಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲೋಕ ಸಭಾಧ್ಯಕ್ಷರ ಅನುಪಸ್ಥಿತಿ ಯಲ್ಲಿ ಲೋಕಸಭೆಯ ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳ ಅಧ್ಯಕ್ಷತೆ ವಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೋಕಸಭಾ ಅಧ್ಯಕ್ಷರಿಗೆ ಇರುವ ಎಲ್ಲಾ ಅಧಿಕಾರಗಳನ್ನು ಅವರು ಚಲಾಯಿಸಬಹುದು. ಆದರೆ, ರಾಜಕೀಯ ಕಾರಣದಿಂದಾಗಿ ಈ ಸ್ಥಾನವನ್ನು ತುಂಬದೇ ಇರುವುದು ಸರಿಯಲ್ಲ. ೬೦,೭೦ ಮತ್ತು ೮೦ ರ ದಶಕಗಳವರೆಗೂ ಈ ಸ್ಥಾನವನ್ನು ವಿರೋಧ ಪಕ್ಷದವರಿಗೆ ನೀಡುವ ಸಂಪ್ರದಾಯ ಚಾಲ್ತಿಯಲ್ಲಿತ್ತು.
ಆದರೆ ನಂತರದ ದಶಕಗಳಲ್ಲಿ ಈ ಸಂಪ್ರದಾಯ ನನೆಗುದಿಗೆ ಬಿದ್ದು, ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಆಳುವ ಪಕ್ಷದ ಸದಸ್ಯರೇ ಚುನಾಯಿತರಾಗುತ್ತಿದ್ದಾರೆ. ಒಂದು ವೇಳೆ ಈ ಸ್ಥಾನವನ್ನು ವಿರೋಧ ಪಕ್ಷಗಳಿಗೆ ನೀಡಿದರೆ, ಆ ರೀತಿ ಆಯ್ಕೆ ಯಾಗುವ ಉಪಾಧ್ಯಕ್ಷರು, ಲೋಕಸಭೆಯಲ್ಲಿ ವಿರೋಧ ಪಕ್ಷಗಳ ದನಿಯಾಗಬಹುದು. ಅದೇನೇ ಇರಲಿ, ಈ ಸ್ಥಾನವನ್ನು ಶೀಘ್ರವಾಗಿ ತುಂಬುವತ್ತ ಕೇಂದ್ರ ಸರ್ಕಾರ ಇನ್ನು ಮುಂದಾದರೂ ಗಮನ ಹರಿಸಬೇಕಾಗಿದೆ.
-ಕೆ.ವಿ.ವಾಸು , ವಿವೇಕಾನಂದ ನಗರ,ಮೈಸೂರು