Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ: ರೈತರ ಬೆಳೆಗಳಿಗೆ ಸರ್ಕಾರವೇ ಬೆಲೆ ನಿಗದಿ ಮಾಡಲಿ

ರಾಜ್ಯದಲ್ಲಿ ರೈತರು ಬೆಳೆದ ತರಕಾರಿ ಹಾಗೂ ಇನ್ನಿತರ ಬೆಳೆಗಳ ಬೆಲೆಗಳು ತಿಂಗಳಿನಿಂದ ತಿಂಗಳಿಗೆ, ದಿನದಿಂದ ದಿನಕ್ಕೆ ಏರುಪೇರಾಗುತ್ತಿದ್ದು, ರೈತರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ ಕಳೆದೆರಡು ತಿಂಗಳಿಗೆ ಹೋಲಿಸಿದರೆ ಇಂದಿನ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ತಿಂಗಳ ಹಿಂದೆ ಕೆ.ಜಿ.ಗೆ 40 ರೂ.ಗಳಿದ್ದ ಬೆಂಡೆಕಾಯಿ ಈಗ 20 ರೂ.ಗಳಾಗಿದೆ. ಬದನೆಕಾಯಿ 60 ರೂ. ಇದ್ದದ್ದು ಈಗ 40 ರೂ. ಆಗಿದೆ.

ಹಾಗೆಯೇ ಹಸಿ ಮೆಣಸಿನಕಾಯಿ, ಕ್ಯಾರೆಟ್, ಟೊಮೆಟೋ ಬೆಲೆಗಳೂ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿವೆ. ಹೀಗೆ ತರಕಾರಿ ಬೆಳೆಗಳು ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದರಿಂದ ಒಂದು ನಿರ್ದಿಷ್ಟ ಬೆಲೆ ಸಿಗದೆ ರೈತರು ಕಂಗಾಲಾಗುತ್ತಿದ್ದಾರೆ.

ರೈತರು ಅತಿವೃಷ್ಟಿ, ಅನಾವೃಷ್ಟಿಯ ನಡುವೆಯೂ ಕಷ್ಟಪಟ್ಟು ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿಯ ನಡುವೆಯೂ ಮಾರುಕಟ್ಟೆಗೆ ತಂದು ಮಾರಾಟ ಮಾಡಿರುತ್ತಾರೆ. ಇಷ್ಟಿದ್ದರೂ ರೈತರಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಹೊಂದುತ್ತಾರೆ ಎಂದರೆ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸುವುದಾದರೂ ಹೇಗೆ? ರೈತರನ್ನು ಈ ದೇಶದ ಬೆನ್ನೆಲುಬು, ಈ ದೇಶದ ಆಸ್ತಿ ಎಂದೆಲ್ಲ ಮಾತನಾಡುವ ಚುನಾಯಿತ ಪ್ರತಿನಿಧಿಗಳು ರೈತರ ಕಷ್ಟ-ಸುಖಗಳನ್ನು ಎಂದಾದರೂ ಆಲಿಸಿದ್ದಾರೆಯೇ? ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳು, ರಸಗೊಬ್ಬರಗಳನ್ನು ಸಕಾಲಕ್ಕೆ ಪೂರೈಕೆ ಮಾಡಿದ್ದಾರೆಯೇ? ಹೀಗಾದರೆ ರೈತರು ಜೀವನ ಮಾಡುವುದಾದರೂ ಹೇಗೆ? ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ ರೈತರು ನಷ್ಟ ಹೊಂದುವುದನ್ನು ತಪ್ಪಿಸಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

 

Tags: