ಗೃಹಲಕ್ಷ್ಮೀ ಯೋಜನೆಯ ಹಣ ಕಳೆದ ಮೂರು ತಿಂಗಳುಗಳಿಂದ ಮಹಿಳೆಯರ ಖಾತೆಗೆ ತಲುಪಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ಗೃಹ ಲಕ್ಷ್ಮೀ ಯೋಜನೆ ಏನು ಮಹಿಳೆಯರಿಗೆ ಪ್ರತಿ ತಿಂಗಳು ಸಂಬಳ ಕೊಡುವ ಯೋಜನೆ ಅಲ್ಲವಲ್ಲ’ ಎಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಉತ್ತರಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯ ವೇಳೆ ೫ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆ ಪೈಕಿ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ೨,೦೦೦ ರೂ. ಮತ್ತು ಅನ್ನಭಾಗ್ಯ ಯೋಜನೆಯಡಿ ೫ ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿತ್ತು. ಆದರೆ, ಕಳೆದ ಮೂರು ತಿಂಗಳುಗಳಿಂದ ಈ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿ ಉಡಾಫೆ ಉತ್ತರ ನೀಡಿರುವುದು ಸರಿಯಲ್ಲ.
ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ನಡೆದುಕೊಳ್ಳದೆ, ಅಧಿಕಾರಕ್ಕೆ ಬಂದ ಬಳಿಕ ಈಗ ಅದೇನು ಪ್ರತಿ ತಿಂಗಳು ನೀಡುವ ಸರ್ಕಾರಿ ಸಂಬಳವೇ ಎಂದು ಹೇಳುವುದು ಎಷ್ಟು ಸರಿ? ಯಾರೂ ಕೂಡ ನಮಗೆ ಮಾಸಿಕ ಎರಡು ಸಾವಿರ ರೂ. ನೀಡಿ ಎಂದು ಕೇಳಿಲ್ಲ. ಅಧಿಕಾರಕ್ಕೇರುವ ಸಲುವಾಗಿ, ನೀವೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಈಗ ಅವುಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರದೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದುಕೊಳ್ಳುವುದು ಸರಿಯಲ್ಲ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





