Mysore
31
scattered clouds

Social Media

ಸೋಮವಾರ, 21 ಏಪ್ರಿಲ 2025
Light
Dark

ಓದುಗರ ಪತ್ರ: ಜಾತಿಗಣತಿ ಪಾರದರ್ಶಕವಾಗಿರಲಿ

ಜಾತಿ ಗಣತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆದರೆ ಈ ಜಾತಿ ಗಣತಿ ಪಾರದರ್ಶಕವಾಗಿ ನಡೆದಿದೆಯೇ ಎಂಬುದರ ಬಗ್ಗೆಯೇ ಸಾರ್ವಜನಿಕರಲ್ಲಿ ಅನುಮಾನ ಇದೆ. ಎಂಟು ವರ್ಷಗಳ ಹಿಂದೆ, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಸಿರುವುದಾಗಿ ಸರ್ಕಾರ ಹೇಳುತ್ತಿದೆ, ನನಗೆ ತಿಳಿದಿರುವಂತೆ ನಮ್ಮ ಬೀದಿಗಾಗಲಿ, ನಮ್ಮಮನೆಗಾಗಲಿ ಯಾವ ಅಧಿಕಾರಿಗಳೂ ಬಂದು ಸಮೀಕ್ಷೆ ನಡೆಸಿಲ್ಲ.

ಸಮೀಕ್ಷೆ ನಡೆಸುವವರು ಬಂದಾಗ, ನಾವು ಊರಿನಲ್ಲಿ ಇಲ್ಲದೇ ಇರಬಹುದೆಂದು ನಮ್ಮ ಅಕ್ಕ- ಪಕ್ಕದ ಮನೆಯವರನ್ನು ಜಾತಿ ಸಮೀಕ್ಷೆ ಮಾಡುವವರು ಯಾರಾದರೂ ಮನೆ ಬಳಿ ಬಂದಿದ್ದರಾ ಎಂದು ವಿಚಾರಿಸಿದರೆ ಇಲ್ಲ ಎನ್ನುತ್ತಾರೆ. ಹಾಗಿದ್ದ ಮೇಲೆ ಜಾತಿ ಸಮೀಕ್ಷೆ ಮಾಡಿರುವುರುವುದಾದರೂ ಎಲ್ಲಿ? ಇಷ್ಟು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಜಾತಿ ಗಣತಿ ವರದಿಯನ್ನು ಈಗ ದಿಢೀರನೇ ಮುನ್ನೆಲೆಗೆ ತರುವುದರ ಹಿಂದಿನ ಉದ್ದೇಶವೇನು? ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜಾತಿ ಜನಗಣತಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಎಲ್ಲೋ, ಎ.ಸಿ. ರೂಂನಲ್ಲಿ ಕುಳಿತು ಮಾಡಿರುವ ಈ ಜಾತಿ ಗಣತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಈಗ ನಡೆದಿರುವ ‘ಜಾತಿಗಣತಿ’ಯನ್ನು ಪರಿಗಣಿಸಬಾರದೆಂಬ ಒತ್ತಾಯವನ್ನು ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ತೋರುತ್ತಿದ್ದು, ಹೊಸದಾಗಿ ನಿಖರವಾಗಿ ಜಾತಿಗಣತಿ ನಡೆಯುವಂತಾಗಲಿ.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags: