ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಾವಿರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲಿ ಇರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡದೇ ಇರುವುದರಿಂದ ಗಬ್ಬು ನಾರುತ್ತಿದ್ದು, ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.
ಇಲ್ಲಿನ ಶೌಚಾಲಯ ಸ್ವಚ್ಛತಾ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಣೆ ಮಾಡಿದರೆ ನೀರಿನ ಸಮಸ್ಯೆ ಎಂದು ಹೇಳಿ, ನಾಳೆ ನಾಳಿದ್ದು, ಸರಿಮಾಡುತ್ತೇವೆ ಎಂದು ಸಬೂಬು ಹೇಳುತ್ತಾರೆಯೇ ಹೊರತು ಸ್ವಚ್ಛತಾ ಕಾರ್ಯ ನಡೆಸುತ್ತಿಲ್ಲ.
ಕುಕ್ಕರಹಳ್ಳಿ ಕೆರೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವುದರಿಂದ ಕುಲಪತಿಗಳು ಮತ್ತು ಕುಲಸಚಿವರು ಪರಿಶೀಲನೆ ಮಾಡಿ ಶೌಚಾಲಯದ ಸ್ವಚ್ಛತೆ ಕಾಪಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





