ಕನ್ನಡ ಭಾಷೆ ತಮಿಳಿನಿಂದ ಹುಟ್ಟಿತು ಎಂದು ನಟ ಕಮಲ್ ಹಾಸನ್ ಹೇಳಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು. ಕನ್ನಡ, ತಮಿಳು, ತೆಲುಗು ಸೋದರ ಭಾಷೆಗಳು ಎಂಬ ಸಾಮಾನ್ಯ ಅರಿವು ಆ ನಟನಿಗೆ ಇಲ್ಲ. ತಮಿಳು ಭಾಷೆಯಷ್ಟೇ ಪ್ರಾಚೀನ ಇತಿಹಾಸವನ್ನು ಕನ್ನಡ ಭಾಷೆಯೂ ಹೊಂದಿದೆ. ಕನ್ನಡ ಎಂಬ ಹೆಸರಿನ ಹಿಂದೆ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮಾತ್ರವಲ್ಲ ಕನ್ನಡ ನುಡಿ, ಜಲ, ಗಡಿ ಎಲ್ಲವೂ ಅಡಗಿವೆ. ರಾಮಾಯಣ, ಮಹಾಭಾರತ ಮಹಾ ಕಾವ್ಯಗಳಲ್ಲಿ ಈ ನೆಲದ ಪ್ರಸ್ತಾಪವಿದೆ. ರಾಮಾಯಣದಲ್ಲಿ ವೈಜಯಂತ, ರಟ್ಟಿಕಾ, ವಾಲಿ, ಸುಗ್ರೀವ, ಹನುಮಂತ ನೆಲೆಸಿದ್ದ ಹಂಪೆ ಸಮೀಪದ ಕಿಷ್ಕಿಂದೆಯ ಉಲ್ಲೇಖವಿದೆ. ಮಹಾಭಾರತದ ಸಭಾ ಪರ್ವದಲ್ಲಿ ಕರ್ನಾಟ, ಕರ್ಣಟಿಕ ಎಂಬ ಹೆಸರುಗಳು ಕೇಳಿ ಬಂದಿವೆ. ಕ್ರಿ.ಶ. ಒಂದನೇ ಶತಮಾನದಲ್ಲೆ ಇಲ್ಲಿಗೆ ಬಂದಿದ್ದ ವಿದೇಶಿಯರಾದ ಪ್ಲೀನಿ, ಟಾಲಮಿ ಮೊದಲಾದವರು ಕನ್ನಡ ಹೆಸರಿನ ಸ್ಥಳಗಳನ್ನು ತಮ್ಮ ಪ್ರವಾಸಿ ಕೃತಿಗಳಲ್ಲಿ ಪ್ರಸ್ತಾಪ ಮಾಡಿರುವುದು ತಿಳಿದು ಬಂದಿದೆ. ದಕ್ಷಿಣ ಭಾರತದಲ್ಲೇ ತಮಿಳಿಗಿಂತ ಮೊದಲು ತನ್ನದೇ ಆದ ಲಿಪಿ ಹೊಂದಿದ ಖ್ಯಾತಿ ಕನ್ನಡಕ್ಕೆ ಇದೆ. ಕನ್ನಡ ಲಿಪಿಯನ್ನು ನೋಡಿದ ವಿನೋಬ ಭಾವೆ ಅವರು ಇದನ್ನು‘ಲಿಪಿಗಳ ರಾಣಿ ’ಎಂದು ಬಣ್ಣಿಸಿದ್ದಾರೆ. ಒಂದು ಭಾಷೆ ಲಿಪಿ ಪಡೆಯಲು ನೂರಾರು, ಸಾವಿರಾರು ವರ್ಷಗಳೇ ಬೇಕು ಎಂದ ಮೇಲೆ ಕನ್ನಡ ಭಾಷೆಯ ಉಗಮ ಸಾವಿರಾರು ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಅರಿಯದೆ ಕಮಲ್ ಹಾಸನ್ ಅವರು ಕನ್ನಡ ಭಾಷೆಯನ್ನು ಅವಮಾನಿಸಿರುವುದು ಖಂಡನೀಯ.
– ಸಿ. ಸಿದ್ದರಾಜು ಆಲಕೆರೆ, ಮಂಡ್ಯ.





