ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅನುವಾದವಾಗಿದ್ದ ಪ್ರಶ್ನೆಗಳು ಗೊಂದಲಮಯವಾಗಿದ್ದು, ಸರಿಯಾಗಿ ಉತ್ತರಗಳನ್ನು ಬರೆಯಲಾಗಿಲ್ಲ ಎಂದು ಆರೋಪಿಸಿರುವ ಅಭ್ಯರ್ಥಿಗಳಿಗೆ ಸೆ.4ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇತ್ತ ಕರ್ನಾಟಕ ಲೋಕಸೇವಾ ಆಯೋಗವು ಭಾಷಾಂತರ ಮಾಡುವವರಿಂದಲೇ ಪ್ರಶ್ನೆಗಳನ್ನು ಭಾಷಾಂತರ ಮಾಡಿಸಿದ್ದು, ಯಾವುದೇ ಗೂಗಲ್ ಅಥವಾ ಎಐ ತಂತ್ರಜ್ಞಾನ ಬಳಸಿ ಭಾಷಾಂತರ ಮಾಡಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸದ್ಯ ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದರೂ ಪ್ರತಿ ಪಶ್ನೆಗೆ 50 ರೂ.ಗಳ ಶುಲ್ಕ ಪಾವತಿಸಬೇಕಿದೆ. ಆಯೋಗ ಮಾಡಿದ ತಪ್ಪಿಗೆ ಆಕ್ಷೇಪಣೆ ಸಲ್ಲಿಸುವ ಪ್ರಶ್ನೆಗಳ ಬಗ್ಗೆ ಆಕ್ಷೇಪ ಸಲ್ಲಿಸುವ ಅಭ್ಯರ್ಥಿಗಳಿಗೆ ಶುಲ್ಕ ವಿಧಿಸುವುದು ಯಾವ ನ್ಯಾಯ?
ಅನೇಕ ಬಡ ಅಭ್ಯರ್ಥಿಗಳು ಹಣವನ್ನು ಕೂಡಿಟ್ಟು ದೂರದ ಊರು ಗಳಲ್ಲಿ ವಾಸ್ತವ್ಯ ಹೂಡಿ ಕೋಚಿಂಗ್ ಸೆಂಟರ್‌ಗಳನ್ನು ಸೇರಿ ತರಬೇತಿ ಪಡೆದು ಪರೀಕ್ಷೆ ಬರೆದಿರುತ್ತಾರೆ. ಈಗ ಆಯೋಗ ಮಾಡಿದ ತಪ್ಪಿಗೆ ಈ ಅಭ್ಯರ್ಥಿಗಳು ಮತ್ತೆ ಶುಲ್ಕ ಪಾವತಿಸಬೇಕು ಎಂದರೆ ಹಣ ಎಲ್ಲಿಂದ ತರುವುದು? ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗವು ಆಕ್ಷೇಪಣೆ ಸಲ್ಲಿಸಲು ವಿಧಿಸಿರುವ ಶುಲ್ಕವನ್ನು ತೆಗೆದುಹಾಕಬೇಕು.
-ಬಿ.ಟಿ.ಅಂಬಿಕಾ, ಹಾಸನ.