ಮೈಸೂರಿನ ಬನ್ನಿಮಂಟಪ ಬಸ್ ಡಿಪೋ ಜಾಗದಲ್ಲಿ ಸುಸಜ್ಜಿತ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಶೀಘ್ರವೇ ನೆರವೇರಲಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಈ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಔಚಿತ್ಯವಾದರೂ ಏನು? ಈಗಾಗಲೇ ಮೈಸೂರಿನಲ್ಲಿ ರೈಲ್ವೆ ನಿಲ್ದಾಣ, ನಗರ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳು ಬೇರೆ ಬೇರೆ ಸ್ಥಳದಲ್ಲಿವೆ. ಪ್ರಯಾಣಿಕರು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೋಗಲು ಬಸ್ ಇಲ್ಲವೇ ಬೇರೆ ಸಾರಿಗೆ ಮೂಲಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ.ಸರ್ಕಾರ ಇರುವುದು ಸಾರ್ವಜನಿಕ ಸೇವೆಗಾಗಿಯೇ ಹೊರತು ಮತ್ಯಾವುದಕ್ಕೂ ಅಲ್ಲ. ಹಾಗಾಗಿ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಅನುಕೂಲವಾಗಿರಬೇಕೇ ಹೊರತು ಅನನುಕೂಲವಾಗಬಾರದು.ಈಗಿರುವ ಗ್ರಾಮಾಂತರ ಬಸ್ ನಿಲ್ದಾಣದ ಎದುರಿರುವ ಪೀಪಲ್ಸ್ ಪಾರ್ಕ್ ಜಾಗದಲ್ಲೇ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬಹುದು. ಇದರಿಂದ ಪ್ರಯಾಣಿಕರಿಗೆ ಅನಗತ್ಯ ಸುತ್ತಾಟ ತಪ್ಪುತ್ತದೆ. ಅದಾಗದಿದ್ದರೆ ರೈಲ್ವೆ ನಿಲ್ದಾಣದ ಎದುರು ಇರುವ ಜೆ.ಕೆ. ಮೈದಾನದಲ್ಲಿ ನಿರ್ಮಿಸಬಹುದು.
ಇದನ್ನೂ ಓದಿ: https://andolana.in/districts/chamarajanagar/death-of-five-tigers-case-dcf-y-chakrapani-suspended/
ನಗರ ಬಸ್ ನಿಲ್ದಾಣವನ್ನೂ ನಿರ್ಮಿಸಿದರೆ ಮೂರೂ ನಿಲ್ದಾಣಗಳು ಒಂದೇ ಕಡೆ ಇದ್ದು, ಪ್ರಯಾಣಿಕರಿಗೆ ಬಹಳ ಅನುಕೂಲವೇ ಆಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಿ ಕ್ರಮವಹಿಸುವುದು ಅಗತ್ಯ.
– ಬಿ.ಎನ್.ಸಿದ್ದುಪ್ರಸನ್ನ, ಬೆಳವಾಡಿ, ಮೈಸೂರು.





