ಪರಿಶಿಷ್ಟ ಜಾತಿಗಳಲ್ಲಿ ೧೦೧ ಉಪ ಜಾತಿಗಳು ನಮೂದಾಗಿದ್ದು, ಈ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ನೇಮಿಸಿದ್ದ ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿ ರಾಜ್ಯ ಸರ್ಕಾರದ ಕೈ ತಲುಪಿದ್ದು, ಸದ್ಯ,ಆಯೋಗದ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ.
ಒಳಮೀಸಲಾತಿಯನ್ನು ಅನುಷ್ಠಾನ ಗೊಳಿಸುವ ಬಗ್ಗೆ ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ಮತ್ತೆ ನಾಗಮೋಹನ್ ದಾಸ್ ಸಮಿತಿಗೆ ವಹಿಸಲಾಗಿದೆ. ಸಮೀಕ್ಷೆಯನ್ನು ೬೦ ದಿನಗಳೊಳಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಏತನ್ಮಧ್ಯೆ, ಇನ್ನೇನು ಕೆಲವೇ ತಿಂಗಳುಗಳಲ್ಲಿ ತಾಲ್ಲೂಕು,ಜಿಲ್ಲಾ ಪಂಚಾಯತ್ ಚುನಾವಣೆ, ತದನಂತರ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಚುನಾವಣೆಗಳು ನಡೆಯಲಿವೆ. ಸರ್ಕಾರವು ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಮೀನ ಮೇಷ ಎಣಿಸುತ್ತಾ ಇನ್ನಷ್ಟು ವಿಳಂಬ ನೀತಿ ಅನುಸರಿಸುವ ಸಾಧ್ಯತೆಯಿದೆ. ಈಗಾಗಲೇ ಕಳೆದ ಕೆಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದೇ ಕಂಗಾಲಾಗಿ ವಯಸ್ಸು ಮೀರಿ ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿರುವ ಸರ್ಕಾರಿ ಹುದ್ದೆಗಳ ಕನಸು ಹೊತ್ತ ಲಕ್ಷಾಂತರ ಅಭ್ಯರ್ಥಿಗಳ ಪಾಡು ಹೇಳತೀರದಾಗಿದೆ.
ಆದ್ದರಿಂದ ನೆರೆಯ ತೆಲಂಗಾಣ ರಾಜ್ಯ ಒಳ ಮೀಸಲಾತಿ ಅನುಷ್ಠಾನ ದಲ್ಲಿ ಇಟ್ಟ ದಿಟ್ಟ ಹೆಜ್ಜೆಯನ್ನು ಕರ್ನಾಟಕ ಸರ್ಕಾರವೂ ಅನುಸರಿಸಲಿ.
– ಅನಿಲ್ ಕುಮಾರ್, ನಂಜನಗೂಡು.





