ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ರಾಜ್ಯಾದ್ಯಂತ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಬಸ್‌ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆ, ಚಾಕೋಲೇಟ್, ಬಿಸ್ಕೆಟ್ ಇನ್ನಿತರ ತಿಂಡಿ ತಿನಿಸುಗಳನ್ನು ತಿಂದು ಪ್ಲಾಸ್ಟಿಕ್ ಕವರ್‌ಗಳನ್ನು, ಬಸ್ಸಿನಲ್ಲಿ ಬಿಟ್ಟು ಹೋಗುತ್ತಾರೆ. ನೀರಿನ ಬಾಟಲಿಯನ್ನು ಬಿಸಾಡಿರುತ್ತಾರೆ. ಇನ್ನೂ ಕೆಲವರು ಕಿಟಕಿಯ ಮೂಲಕ ಕಸವನ್ನು ಎಸೆಯುತ್ತಾರೆ.
ಬೇರೆ ಪ್ರಯಾಣಿಕರು ಬಸ್ ಹತ್ತಿದಾಗ ಬಸ್‌ನಲ್ಲಿ ಕಸ ಬಿದ್ದಿರುವುದು ಕಂಡರೆ ಬೇಸರವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಕಸದ ಬುಟ್ಟಿಯನ್ನು ಅಳವಡಿಸಿ, ಪ್ರಯಾಣಿಕರು ಕಡ್ಡಾಯವಾಗಿ ಕಸವನ್ನು ಕಸದ ಬುಟ್ಟಿಯಲ್ಲಿ ಹಾಕುವಂತೆ ಅರಿವು ಮೂಡಿಸಬೇಕು. ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಬೇಕು. ಹೀಗಾದಾಗ ಮಾತ್ರ ಸಾರಿಗೆ ನಿಗಮದ ಬಸ್‌ಗಳಲ್ಲಿ ಸ್ವಚ್ಛತೆ ಕಾಪಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಾರಿಗೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅಗತ್ಯ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು




