ಮುಂಬೈನಿಂದ ಅಸ್ಸಾಂನ ಗೌಹತಿಗೆ ಮದುವೆಗೆಂದು ತೆರಳುತ್ತಿದ್ದ ಒಂದೇ ಕುಟುಂಬದ 34 ಸದಸ್ಯರಿದ್ದ ರೈಲು, ನ.14ರ ಬೆಳಿಗ್ಗೆ 6.55ಕ್ಕೆ ಮುಂಬೈನಿಂದ ಹೊರಟು, ನ.15ರಂದು ಹೌರ ನಗರವನ್ನು 4 ಗಂಟೆಗಳ ಕಾಲ ತಡವಾಗಿ ತಲುಪಿದೆ.
ರೈಲು ತಡವಾಗಿದ್ದರಿಂದ ಗೌಹತಿಯನ್ನು ಮದುವೆ ಮುಹೂರ್ತದ ಸಮಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಎಂಬುದನ್ನು ಅರಿತ ಆ ಕುಟುಂಬ ಈ ಕುರಿತು ‘ಎಕ್ಸ್’ ಖಾತೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರನ್ನು ಉಲ್ಲೇಖಿಸಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿತ್ತು. ವಿಚಾರ ತಿಳಿದ ಕೂಡಲೇ ಕ್ರಮಕ್ಕೆ ಮುಂದಾದ ಸಚಿವರು, ರೈಲ್ವೆ ಇಲಾಖೆ ಅಧಿಕಾರಿಗಳಿಗೆ ರೈಲು ನಿಗದಿತ ಸಮಯಕ್ಕೆ ಗೌಹತಿಯನ್ನು ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಪರಿಣಾಮ ರೈಲು ನಿಗದಿಪಡಿಸಿದಂತೆ ನ.16ರ ಬೆಳಿಗ್ಗೆ 10:05ಕ್ಕೆ ಗೌಹತಿ ತಲುಪಿದೆ. ಇದರಿಂದಾಗಿ ಮದುವೆ ಸುಸೂತ್ರವಾಗಿ ನಡೆದಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಸಾಮಾನ್ಯವಾಗಿ ರೈಲುಗಳು ಆಗಾಗ್ಗೆ ವಿಳಂಬವಾಗುವ ಕಾರಣಕ್ಕೆ ಸುದ್ದಿಯಲ್ಲಿರುತ್ತವೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ನಿಲ್ದಾಣದಿಂದ ಹೊರಟರೂ ತಲುಪಬೇಕಾದ ಸ್ಥಳವನ್ನು ನಿಗದಿತ ಸಮಯಕ್ಕೆ ತಲುಪುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಸದ್ಯ ಈಗ ರೈಲ್ವೆ ಸಚಿವರು ಪ್ರಯಾಣಿಕರ ಮನವಿಗೆ ಸ್ಪಂದಿಸಿ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣವನ್ನು ತಲುಪುವಂತೆ ಮಾಡಿರುವುದು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಮೇಲೆ ಭರವಸೆ ಮೂಡುವಂತೆ ಮಾಡಿದೆ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.