ರಾಜ್ಯದ ವಿವಿಧ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೬೦ ವರ್ಷಗಳನ್ನು ಪೂರೈಸಿರುವ ಅತಿಥಿ ಉಪನ್ಯಾಸಕರಿಗೆ ಅವರ ನಿವೃತ್ತಿ ಸಮಯದಲ್ಲಿ ಐದು ಲಕ್ಷ ರೂಪಾಯಿಗಳ ಇಡುಗಂಟನ್ನು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ.
ರಾಜ್ಯದ ವಿವಿಧ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಾವಿರಾರುವ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಅವರಿಗೆ ಸಂಚಿತ ವೇತನದ ಹೊರತು ಸೇವಾಭದ್ರತೆ ಒಳಗೊಂಡಂತೆ ಬೇರಾವುದೇ ಸೇವಾ ಸೌಲಭ್ಯಗಳು ದೊರೆಯುತ್ತಿಲ್ಲ.
ಇಂತಹ ಉಪನ್ಯಾಸಕರ ಪೈಕಿ ಅನೇಕರು ಪಿಎಚ್.ಡಿ. ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡ ಉತ್ತೀರ್ಣರಾಗಿದ್ದಾರೆ. ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಈ ಉಪನ್ಯಾಸಕರು ಕಳೆದ ಹಲವಾರು ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಇವರ ಖಾಯಮಾತಿಗೆ ಹಲವಾರು ತಾಂತ್ರಿಕ ಅಡಚಣೆಗಳು ಹಾಗೂ ವಯೋಮಿತಿ ಅಡ್ಡವಾಗಿರುವುದರಿಂದ ಇವರನ್ನು ಖಾಯಂಗೊಳಿಸಲಾಗಿಲ್ಲ ಎನ್ನಲಾಗಿದೆ. ಆದರೂ, ರಾಜ್ಯ ಸರ್ಕಾರ ಇವರ ವೇತನವನ್ನು ಆಗಾಗ ಹೆಚ್ಚಳ ಮಾಡುತ್ತಲೇ ಬಂದಿದೆ. ಇದೀಗ ಐದು ಲಕ್ಷ ರೂ. ಇಡುಗಂಟನ್ನು ನೀಡುವ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





