ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ‘ಜೆಮಿನಿ ಸರ್ಕಸ್’ ಪ್ರಾರಂಭಗೊಂಡಿದೆ. ದೇಶದ ಸರ್ಕಸ್ ಕಂಪೆನಿಗಳ ಇತಿಹಾಸದಲ್ಲಿ ‘ಜೆಮಿನಿ’ ಸರ್ಕಸ್‌ಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ದೇಶದ ಉದ್ದಗಲಕ್ಕೂ ಚಿರಪರಿಚಿತವಾಗಿರುವ ಈ ಕಂಪೆನಿಯ ಅತ್ಯಾಕರ್ಷಕ ಪ್ರದರ್ಶನಗಳು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ.
ಪ್ರಾಣಿ ದಯಾ ಸಂಘದವರ ಮಧ್ಯ ಪ್ರವೇಶದಿಂದ ಪ್ರಾಣಿಗಳನ್ನು ಸರ್ಕಸ್‌ನಲ್ಲಿ ಬಳಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದರಿಂದ, ಸರ್ಕಸ್ ಕಂಪನಿಗಳು ಅವನತಿಯತ್ತ ಸಾಗಿವೆ. ದೇಶದಲ್ಲಿ ಜೆಮಿನಿ ಸರ್ಕಸ್ ಸೇರಿದಂತೆ ಕೆಲವು ಸರ್ಕಸ್ ಕಂಪನಿಗಳು ಮಾತ್ರ ಉಳಿದುಕೊಂಡಿವೆ ಎಂದು ಹೇಳಲಾಗಿದೆ.
ಈ ಕಂಪನಿಗಳನ್ನೇ ನಂಬಿಕೊಂಡು ಬದುಕುತ್ತಿರುವ ನೂರಾರು ಮಂದಿ ನೌಕರರಿಗೆ, ಇದುವೇ ಜೀವನಾಧಾರವಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಸರ್ಕಸ್ ಕಂಪನಿಗಳ ನೆರವಿಗೆ ಬರುವುದು ಅಗತ್ಯವಾಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





