ಸಾಲಿಗ್ರಾಮ ತಾಲ್ಲೂಕಿನ ನಿಜಗನಹಳ್ಳಿ ಗ್ರಾಮದಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲದೆ ಜನರು ಪರದಾಡುವಂತಾಗಿದ್ದು, ಇಲ್ಲಿನ ಗ್ರಾಮ ಪಂಚಾಯಿತಿಯವರ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ.
ನಿಜಗನಹಳ್ಳಿ ಗ್ರಾಮದಿಂದ ಮಾರಗೌಡನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ೨೦ ವರ್ಷಗಳಿಂದಲೂ ದುರಸ್ತಿಗೊಳಿಸಿಲ್ಲ. ರಸ್ತೆಗೆ ಹಾಕಿದ್ದ ಡಾಂಬರು ಕಿತ್ತುಬಂದಿದ್ದು, ರಸ್ತೆ ಗುಂಡಿಬಿದ್ದಿದೆ. ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡವೂ ಶಿಥಿಲಗೊಂಡಿದ್ದು, ಇಂದೋ ನಾಳೆಯೋ ಬೀಳುವ ಅಪಾಯದಲ್ಲಿದೆ.
ಇಷ್ಟಿದ್ದರೂ ಅಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಆತಂಕಪಡುವಂತಾಗಿದೆ. ಇನ್ನು ಗ್ರಾಮದ ವಿದ್ಯುತ್ ಕಂಬಗಳಲ್ಲಿ ಬಲ್ಬ್‌ಗಳೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಕಗ್ಗತ್ತಲು ಆವರಿಸಿಕೊಳ್ಳುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲದೆ ತ್ಯಾಜ್ಯ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಭಾಗದ ಶಾಸಕರು ಕಾಳಜಿ ವಹಿಸಿ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು