ಮೈಸೂರಿನ ಕುವೆಂಪುನಗರ ಮಾರ್ಗದಲ್ಲಿ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳಿಂದ ವಿಪರೀತವಾಗಿ ಕಪ್ಪು ಹೊಗೆ ಬರುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಬಸ್ಸುಗಳು ಹಳೆಯದಾಗಿರುವುದರಿಂದ ವಿಪರೀತ ಹೊಗೆ ಬರುತ್ತಿದೆ ಎನ್ನಲಾಗುತ್ತಿದೆ.
ಟ್ರಾಫಿಕ್ ಪೊಲೀಸರು ಪೆಟ್ರೋಲ್, ಡೀಸೆಲ್‌ನಿಂದ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಹೊಗೆ ತಪಾಸಣೆ ಕಡ್ಡಾಯಗೊಳಿಸಿದ್ದು, ಅನುಮಾನ ಬಂದಲ್ಲಿ ದಂಡವನ್ನು ವಿಧಿಸುತ್ತಾರೆ. ಆದರೆ ಸರ್ಕಾರದ ಒಡೆತನದಲ್ಲಿರುವ ಸಾರಿಗೆ ನಿಗಮದ ಬಸ್‌ಗಳಿಗೆ ಮಾಲಿನ್ಯ ತಪಾಸಣೆ ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಬರುತ್ತಿದೆ. ಕೂಡಲೇ ನಗರ ಸಾರಿಗೆ ಅಧಿಕಾರಿಗಳು ತೀವ್ರವಾಗಿ ಹೊಗೆ ಸೂಸುತ್ತಿರುವ ನಗರ ಸಾರಿಗೆ ಬಸ್‌ಗಳ ಸಂಚಾರವನ್ನು ನಿಲ್ಲಿಸಬೇಕು ಹಾಗೂ ಬೆಂಗಳೂರಿನ ಮಾದರಿಯಲ್ಲಿ ಮೈಸೂರಿನಲ್ಲೂ ವಿದ್ಯುತ್ ಚಾಲಿತ ನಗರ ಸಾರಿಗೆ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಂಡು ಪರಿಸರ ನೈರ್ಮಲ್ಯ ಕಾಪಾಡಬೇಕಾಗಿದೆ.
-ಬಿ.ಎಸ್.ಸಾಯಿ ಸಂದೇಶ್, ಮೈಸೂರು





