ಎಸ್‌ಎಸ್‌ಎಲ್‌ಸಿ ಹಿಂದಿ ಭಾಷೆಯ ಪರೀಕ್ಷೆ ಮಾ.೩೧ರಂದು ನಡೆಯಲಿದ್ದು, ಪರೀಕ್ಷೆ ಸಂದರ್ಭದಲ್ಲಿಯೇ ಸರ್ಕಾರ ಹಿಂದಿ ವಿಷಯದಲ್ಲಿ ಅಂಕಗಳನ್ನು ಪರಿಗಣಿಸುವುದಿಲ್ಲ, ಬದಲಾಗಿ ಗ್ರೇಡ್ ನೀಡಲಾಗುವುದು ಎಂದು ಹೇಳಿರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಬೇಸರ ಮೂಡಿಸಿದೆ.
ವರ್ಷಪೂರ್ತಿ ಕಲಿಸಿದ ಗುರುಗಳ ಹಾಗೂ ವಿದ್ಯಾರ್ಥಿಗಳ ಪಾಡೇನು? ಶಿಕ್ಷಕರ ಶ್ರಮಕ್ಕೆ ಹಾಗೂ ಮಕ್ಕಳ ಕಲಿಕೆಗೆ ಬೆಲೆ ಬೇಡವೇ? ನಮ್ಮ ಕನ್ನಡದ ಮಕ್ಕಳನ್ನು ಬರೀ ಕನ್ನಡಕ್ಕೆ ಏಕೆ ಸೀಮಿತಗೊಳಿಸಲಾಗುತ್ತಿದೆ? ಹಿಂದಿ ಕಲಿತರೆ ರಾಷ್ಟ್ರ ಮಟ್ಟದಲ್ಲಿ ಮಕ್ಕಳು ಪ್ರತಿ ನಿಧಿಸಲು, ಬೆಳೆಯಲು ಒಳಿತಾಗುವುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಹಿಂದಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಹಲವಾರು ದಶಕಗಳಿಂದ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಹೀಗಾಗಿ ನಮ್ಮ ಕನ್ನಡ ಮಕ್ಕಳು ಆ ಭಾಷೆಯನ್ನು ಇಷ್ಟಪಟ್ಟು ಕಲಿಯುವುದರಲ್ಲಿ ತಪ್ಪೇನೂ ಇಲ್ಲ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ನಿತ್ಯ ಹಿಂದಿ ಕಲಿಸುತ್ತಿರುವ ರಾಜ್ಯದಲ್ಲಿನ ಸಾವಿರಾರು ಶಿಕ್ಷಕರ ಗತಿಯೇನು? ಈ ಬಗ್ಗೆಯೂ ಸರ್ಕಾರ ಚಿಂತಿಸುವುದು ಒಳಿತು.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





